-->
ನ್ಯಾಯಾಂಗ ನೌಕರರಿಗೆ 'ಸುಪ್ರೀಂ' ಜಯ: ಜಿಲ್ಲಾ ಸರ್ಕಾರಿ ನೌಕರರ ಪದಾಧಿಕಾರಿಗಳು, ಚುನಾವಣಾಧಿಕಾರಿಗೆ 5 ಲಕ್ಷ ದಂಡ- ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!

ನ್ಯಾಯಾಂಗ ನೌಕರರಿಗೆ 'ಸುಪ್ರೀಂ' ಜಯ: ಜಿಲ್ಲಾ ಸರ್ಕಾರಿ ನೌಕರರ ಪದಾಧಿಕಾರಿಗಳು, ಚುನಾವಣಾಧಿಕಾರಿಗೆ 5 ಲಕ್ಷ ದಂಡ- ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!

ನ್ಯಾಯಾಂಗ ನೌಕರರಿಗೆ 'ಸುಪ್ರೀಂ' ಜಯ: ಜಿಲ್ಲಾ ಸರ್ಕಾರಿ ನೌಕರರ ಪದಾಧಿಕಾರಿಗಳು, ಚುನಾವಣಾಧಿಕಾರಿಗೆ 5 ಲಕ್ಷ ದಂಡ- ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!





ಮತದಾನದ ಸಂವಿಧಾನಾತ್ಮಕ ಹಕ್ಕಿನಿಂದ ನ್ಯಾಯಾಂಗ ಇಲಾಖಾ ನೌಕರರನ್ನು ವಂಚಿತರನ್ನಾಗಿ ಮಾಡಿದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ ಮರುಚುನಾವಣೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.


ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ದಿನಾಂಕ 26.11.2024ರೊಳಗೆ ಚುನಾವಣೆ ನಡೆಸುವಂತೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯವು ಅಜ್ಞಾಪಕ ನಿರ್ಬಂಧಕಾಜ್ಞೆಯ ಆದೇಶವನ್ನು ಹೊರಡಿಸಿತ್ತು. ಈ ಆದೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ಪಾಲಿಸುವ ಬದಲು ಮಾನ್ಯ ಕರ್ನಾಟಕ ಹೈಕೋರ್ಟಿಗೆ ದುರುದ್ದೇಶ ಪೂರಿತವಾಗಿ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಆದೇಶದ ವಿರುದ್ಧ ತಡೆಯಾಜ್ಞೆ ಪಡೆಯಲು ಬಯಸಿದ್ದರು.


ಆದರೆ, ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಯ ದುರುದ್ದೇಶ ಪೂರಿತ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಕರ್ನಾಟಕ ಹೈಕೋರ್ಟ್ ದಿನಾಂಕ 13 ಡಿಸೆಂಬರ್ 2024 ರಂದು ಹೊರಡಿಸಿದ ಆದೇಶದಲ್ಲಿ ರಿಟ್ ಅರ್ಜಿದಾರರಿಗೆ ರೂಪಾಯಿ 5 ಲಕ್ಷ ದಂಡವನ್ನು ವಿಧಿಸಿ ಮರು ಚುನಾವಣೆ ನಡೆಸುವಂತೆ ನಿರ್ದೇಶಿಸಿ ರಿಟ್ ಅರ್ಜಿಯನ್ನು ವಜಾಗೊಳಿಸಿತ್ತು.


ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪಾಲಿಸುವ ಬದಲು ಸಂಘದ ಪದಾಧಿಕಾರಿಗಳು ಸದರಿ ಆದೇಶವನ್ನು ಪ್ರಶ್ನಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿಯನ್ನು ಸಲ್ಲಿಸಿದ್ದರು. ಸದರಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ದಿನಾಂಕ 2 ಜನವರಿ 2025ರಂದು ಪ್ರಕರಣವನ್ನು ಪಟ್ಟಿ ಮಾಡಲು ಆದೇಶವಾಗಿತ್ತು.


ವಿಶೇಷ ಅನುಮತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ದಿನಾಂಕ 2 ಜನವರಿ 2025ರಂದು ಮಾನ್ಯ ಸುಪ್ರೀಂ ಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ರಿಷಿಕೇಶ್ ರಾಯ್ ಮತ್ತು ಶ್ರೀ ಎಸ್ ವಿ ಎನ್ ಭಟ್ಟಿ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠದ ಸಮಕ್ಷಮ ಪ್ರಕರಣದ ವಿಚಾರಣೆಯು ನಡೆದಿದೆ. ವಿಶೇಷ ಅನುಮತಿ ಅರ್ಜಿಯ ಅಂಗೀಕಾರ ಹಂತದಲ್ಲಿಯೇ ಗೌರವಾನ್ವಿತ ವಿಭಾಗೀಯ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿದೆ.


ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ:

ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿದ್ದರೂ ತನಗೆ ಮತ ಚಲಾಯಿಸುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಇಲ್ಲವೆಂಬ ಷರಾದಿಂದ ಬಾಧಿತರಾದ ದ.ಕ.ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ನ್ಯಾಯಾಂಗ ಇಲಾಖೆಯ ಶಿರಸ್ತೇದಾರ್ ಶ್ರೀ ಪ್ರಕಾಶ್ ನಾಯಕ್ ಅವರು ತನಗೆ ಚುನಾವಣೆಯಲ್ಲಿ ಮತದಾನ ಮಾಡುವ ಸ್ಪರ್ಧಿಸುವ ಹಕ್ಕನ್ನು ನೀಡುವಂತೆ ಪ್ರತಿವಾದಿ ಸಂಘಕ್ಕೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ ದಾವೆಯಲ್ಲಿ ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆಜ್ಞಾಪಕ ನಿರ್ಬಂಧಕಾಜ್ಞೆಯ ಅನ್ವಯ ಚುನಾವಣೆಯಲ್ಲಿ ಮತ ಚಲಾಯಿಸಲು ಹಾಗೂ ಸ್ಪರ್ಧಿಸಲು ಶ್ರೀ ಪ್ರಕಾಶ್ ನಾಯಕ್ ಅವರಿಗೆ ಅವಕಾಶ ಪ್ರಾಪ್ತವಾಗಿತ್ತು.


ಆದರೆ ನ್ಯಾಯಾಲಯದ ಆದೇಶವನ್ನು ಚುನಾವಣಾ ಅಧಿಕಾರಿ ಪಾಲಿಸದ ಕಾರಣ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗಿತ್ತು. ಸದರಿ ಅರ್ಜಿಯಲ್ಲಿ ಹೊರಡಿಸಿದ ಆದೇಶಕ್ಕೆ ಮಣಿದು ಪರಿಷ್ಕೃತ ಆದೇಶವನ್ನು ಹೊರಡಿಸಿ ಅವರಿಗೆ ಮತದಾನದ ಹಾಗೂ ಸ್ಪರ್ಧಿಸುವ ಅವಕಾಶ ನೀಡಲಾಗಿತ್ತು. ಆದರೆ ಚುನಾವಣಾಧಿಕಾರಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಅವರ ಸ್ಥಾನಕ್ಕೆ ನೇಮಕಗೊಂಡ ಚುನಾವಣಾಧಿಕಾರಿ ಮತ್ತೆ ನ್ಯಾಯಾಂಗ ಆದೇಶವನ್ನು ಉಲ್ಲಂಘಿಸಿ ದಿನಾಂಕ 16.11.2024 ರಂದು ನ್ಯಾಯಾಂಗ ಇಲಾಖೆಯನ್ನು ಹೊರತುಪಡಿಸಿ ಉಳಿದ ಇಲಾಖೆಗಳಿಗೆ ಚುನಾವಣೆ ನಡೆಸಿದ್ದರು. ಹಾಗೂ ನ್ಯಾಯಾಂಗ ಇಲಾಖೆಯ ಚುನಾವಣೆಯನ್ನು ಕಾದಿರಿಸಲಾಗಿದೆ ಎಂಬ ಪತ್ರಿಕಾ ಪ್ರಕಟಣೆ ನೀಡಿದ್ದರು.


ಈ ಮಧ್ಯೆ ಪದಾಧಿಕಾರಿಗಳ ಚುನಾವಣೆಗೆ ಪ್ರಕಟಣೆ ಹೊರಡಿಸಲಾಯಿತು. ನ್ಯಾಯಾಂಗ ಇಲಾಖೆಯ ಚುನಾವಣೆ ನಡೆಸಿ ತನಗೆ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬೇಕೆಂದು ಕೋರಿ ಮತ್ತು ಮತ್ತೋರ್ವ ಅಭ್ಯರ್ಥಿ ಶ್ರೀಮತಿ ಸಬಿತಾ ಸೆರಾವೊ ಅವರು ಹೂಡಿದ ದಾವೆಯಲ್ಲಿ ಸಲ್ಲಿಸಿದ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ದಿನಾಂಕ 26‌.11.2024ರೊಳಗೆ ಚುನಾವಣೆ ನಡೆಸುವಂತೆ ದಿನಾಂಕ 22.11.2024 ರಂದು ಆಜ್ಞಾಪಕ ನಿರ್ಬಂಧಕಾಜ್ಞೆ ಆದೇಶ ನೀಡಿತು‌.


ಆದರೆ ಸದರಿ ಆದೇಶವನ್ನು ಪಾಲಿಸುವ ಬದಲು ಮಾನ್ಯ ಹೈಕೋರ್ಟಿಗೆ ಸಂಘದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ರಿಟ್ ಅರ್ಜಿ ಸಲ್ಲಿಸಿ ವಾಸ್ತವ ಸಂಗತಿಗಳನ್ನು ಮರೆಮಾಚಿ ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದರು. ಎದುರುದಾರರಿಗೆ ತುರ್ತು ನೋಟಿಸ್ ನೀಡುವಂತೆ ಆದೇಶಿಸಿದ ಹೈಕೋರ್ಟ್ ಪ್ರಕರಣದ ವಿಚಾರಣೆಯನ್ನು ದಿನಾಂಕ 12.12.2024ಕ್ಕೆ ನಿಗದಿಪಡಿಸಿತು.


ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯದ ಆದೇಶದಿಂದ ಯಾವುದೇ ರೀತಿಯಲ್ಲಿ ಬಾಧಿತರಾಗದ ಸಂಘದ ಪದಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಯು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ ಮಾಡುವ ಸಾಂವಿಧಾನಿಕ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಇಲಾಖೆಯ ನೌಕರರ ಚುನಾವಣೆಗೆ ತಡೆಯಾಜ್ಞೆ ಪಡೆದು ಅವರನ್ನು ಮತದಾನದ ಪವಿತ್ರ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವ ಸಂಗತಿಯನ್ನು ದಾಖಲೆಗಳ ಸಹಿತ ಎದುರುದಾರರ ಪರ ವಾದಿಸಿದ ವಕೀಲರಾದ ಶ್ರೀ ರವಿಶಂಕರ್ ಶಾಸ್ತ್ರಿ ಜಿ. ಅವರು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಆರ್. ನಟರಾಜ್ ಅವರಿದ್ದ ನ್ಯಾಯಪೀಠದ ಅವಗಾಹನೆಗೆ ತಂದರು.


ಮಂಗಳೂರಿನ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ಇಲಾಖೆಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸುವ ಮೂಲಕ ಚುನಾವಣಾಧಿಕಾರಿಯು ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದಿರುವ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಿನಾಂಕ 27.12.2024 ರಂದು ರಾಜ್ಯ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣಾ ದಿನಾಂಕ ನಿಗದಿಯಾಗಿರುವುದನ್ನು ಪರಿಗಣಿಸಿ ದಿನಾಂಕ 27.12.2024 ರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತು.


ಮಾನ್ಯ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ನ್ಯಾಯಾಂಗ ಇಲಾಖೆಯ ನೌಕರರನ್ನು ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿದ ಕಾರಣಕ್ಕಾಗಿ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾಧಿಕಾರಿಗೆ 5 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಯಿತು. ಆದೇಶದ ದಿನಾಂಕದಿಂದ ನಾಲ್ಕು ವಾರಗಳ ಅವಧಿಯೊಳಗೆ ದಂಡದ ಹಣವನ್ನು ಹೊಸಬೆಳಕು ವೃದ್ಧಾಶ್ರಮ ಸಂಸ್ಥೆಗೆ ನೀಡುವಂತೆ ಮಾನ್ಯ ಹೈಕೋರ್ಟ್ ಆದೇಶಿಸಿದೆ.


ಮಾನ್ಯ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಪಾಲಿಸುವ ಬದಲು ಸದರಿ ಆದೇಶವನ್ನು ಪ್ರಶ್ನಿಸಿ ಸಂಘದ ಪದಾಧಿಕಾರಿಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿಯನ್ನು ಸಲ್ಲಿಸಿದರು. ದಿನಾಂಕ 2.1.2025 ರಂದು ಸದರಿ ಅರ್ಜಿಯು ಅಂಗೀಕಾರ ಹಂತದಲ್ಲಿಯೇ ವಜಾ ಗೊಂಡಿದೆ.


ನ್ಯಾಯಾಂಗ ಇಲಾಖೆಯ ನೌಕರರನ್ನು ಮತದಾನದ ಹಕ್ಕಿನಿಂದ ವಂಚಿಸಿ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಸಂಘದ ಪದಾಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿ ನ್ಯಾಯಾಂಗ ನಿಂದನೆಯ ಶಿಕ್ಷೆಗೊಳಪಡುವ ಆತಂಕದಲ್ಲಿದ್ದಾರೆ. ದಿನಾಂಕ 27.12.2024 ರೊಳಗೆ ಚುನಾವಣೆ ನಡೆಸಿ ತನ್ನ ಆದೇಶವನ್ನು ಕಾರ್ಯಗತಗೊಳಿಸಿದ ಕುರಿತು ಪಾಲನಾ ವರದಿಯನ್ನು 16.1.2025 ರಂದು ಸಲ್ಲಿಸಬೇಕೆಂದು ಮಾನ್ಯ ಹೈಕೋರ್ಟ್ ಆದೇಶಿಸಿದೆ.


ನ್ಯಾಯಾಂಗ ನಿಂದನಾ ಕಾಯ್ದೆ 1971 ರಡಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವುದು ಕ್ರಿಮಿನಲ್ ಅಪರಾಧವಾಗಿದೆ. ತಪ್ಪಿತಸ್ಥರಿಗೆ ಕಾರಾಗ್ರಹವಾಸದ ಶಿಕ್ಷೆ ವಿಧಿಸಬಹುದಾಗಿದೆ. ಸರಕಾರಿ ನೌಕರರು ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ಒಳಗೊಂಡು ಶಿಕ್ಷೆ ಅನುಭವಿಸಿದ್ದೇ ಆದಲ್ಲಿ ಅವರ ಸೇವಾ ಜೀವನಕ್ಕೆ ಕುತ್ತು ಬರಲಿದೆ.

Ads on article

Advertise in articles 1

advertising articles 2

Advertise under the article