
ಕೋರ್ಟ್ ಆದೇಶ ನೀಡಿದರೂ ಸ್ಕೂಟರ್ ರಿಲೀಸ್ ಮಾಡದ ಇನ್ಸ್‌ಪೆಕ್ಟರ್: ಲಂಚಕ್ಕೆ ಕೈಯೊಡ್ಡಿದ ಭ್ರಷ್ಟ ಪೊಲೀಸ್ ಅಧಿಕಾರಿ ಮಹಮ್ಮದ್ ಷರೀಫ್ ಸಹಚರನ ಸಹಿತ ಜೈಲಿಗೆ
ಕೋರ್ಟ್ ಆದೇಶ ನೀಡಿದರೂ ಸ್ಕೂಟರ್ ರಿಲೀಸ್ ಮಾಡದ ಇನ್ಸ್‌ಪೆಕ್ಟರ್: ಲಂಚಕ್ಕೆ ಕೈಯೊಡ್ಡಿದ ಭ್ರಷ್ಟ ಪೊಲೀಸ್ ಅಧಿಕಾರಿ ಮಹಮ್ಮದ್ ಷರೀಫ್ ಸಹಚರನ ಸಹಿತ ಜೈಲಿಗೆ
ಪ್ರಕರಣವೊಂದರಲ್ಲಿ ವಾಹನ ಬಿಡುಗಡೆಗೆ ಮಂಗಳೂರು ನ್ಯಾಯಾಲಯ ಆದೇಶ ಮಾಡಿದ್ದರೂ, ಈ ಆದೇಶ ಪಾಲಿಸಿ ಪೊಲೀಸ್ ಠಾಣೆಯಿಂದ ಸ್ಕೂಟರನ್ನು ಬಿಡುಗಡೆ ಮಾಡಬೇಕಿದ್ದರೆ ಲಂಚ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದ್ದ ಪೊಲೀಸ್ ಅಧಿಕಾರಿಯ ಗ್ರಹಚಾರ ಬಿಡಿಸಲಾಗಿದೆ.
ಲಂಚದ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲು ಪಾಲಾಗಿದ್ದಾರೆ. ಈತ ವಾಹನ ಮಾಲೀಕರಿಂದ ರೂ. 5,000/- ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ.
ಈತನ ಜೊತೆಗೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರವೀಣ್ ನಾಯ್ಕ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೊಲೀಸರ ವಶದಲ್ಲಿ ಇದ್ದ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶ ಮಾಡಿತ್ತು. ಆದರೆ, ಈ ಆದೇಶ ಪಾಲಿಸಲು ತನಗೆ ಕೈ ಬಿಸಿ ಮಾಡಬೇಕು. ಇಲ್ಲದಿದ್ದರೆ ವಾಹನ ರಿಲೀಸ್ ಮಾಡಲ್ಲ ಎಂದು ಈ ಪೊಲೀಸಪ್ಪ ಧಮಕಿ ಹಾಕಿದ್ದ.
ಆದರೆ, ಪೊಲೀಸ್ ಠಾಣೆಯಲ್ಲಿ ಲಂಚದ ಹಣಕ್ಕೆ ಕೈ ಚಾಚಿದ ಇನ್ಸ್ಪೆಕ್ಟರ್ ಮಹಮ್ಮದ್ ಶರೀಫ್ ಮತ್ತು ಸಿಬ್ಬಂದಿ ಪ್ರವೀಣ್ ನಾಯ್ಕ ಈಗ ಜೈಲು ಕಂಬಿಯನ್ನು ಎಣಿಸುವಂತಾಗಿದೆ.
ಘಟನೆಯ ವಿವರ
ಪ್ರಕರಣ ಒಂದರಲ್ಲಿ ವಶಪಡಿಸಿಕೊಳ್ಳಲಾದ ಸ್ಕೂಟರನ್ನು ಬಿಡುಗಡೆ ಮಾಡಲು ವಾಹನ ಮಾಲೀಕರು ನ್ಯಾಯಾಲಯದ ಆದೇಶ ಪಡೆದು ಕೊಂಡಿದ್ದರು. ಆದರೆ ಪೊಲೀಸರಿಗೆ ನ್ಯಾಯಾಲಯದ ಆದೇಶ ಪ್ರತಿಯನ್ನು ನೀಡಿದರೂ ಇದಕ್ಕೆ ಸೊಪ್ಪು ಹಾಕದೆ ಐದು ಸಾವಿರ ಲಂಚ ನೀಡಿದರೆ ಮಾತ್ರ ವಾಹನ ರಿಲೀಸ್ ಮಾಡುವುದಾಗಿ ಬೇಡಿಕೆ ಇಟ್ಟಿದ್ದರು.
ದಿಕ್ಕೇ ತೋಚದ ವಾಹನ ಮಾಲೀಕ ಲಂಚದ ಮೊತ್ತವನ್ನು ತುಸು ಕಡಿಮೆ ಮಾಡುವಂತೆ ಮನವಿ ಮಾಡಿದರು. ಆಗ ಠಾಣೆಯ ಬರಹಗಾರರಾದ ನಾಗರತ್ನ ಅವರನ್ನು ಭೇಟಿ ಮಾಡಲು ಶರೀಫ್ ತಿಳಿಸಿದ್ದರು.
ಪೊಲೀಸ್ ಸಿಬ್ಬಂದಿ ನಾಗರತ್ನ ಬಳಿಗೆ ಹೋದಾಗ ವಾಹನ ಮಾಲೀಕರನ್ನು ಆಕೆ ಅವಾಚ್ಯವಾಗಿ ಬೈದು ಮೂರು ಸಾವಿರ ರೂಪಾಯಿ ಲಂಚ ನೀಡುವಂತೆ ಕೇಳಿದರು. ಲಂಚ ನೀಡಲು ಮನಸ್ಸಿಲ್ಲದ ಕಾರಣ ಅಂತಿಮವಾಗಿ ವಾಹನ ಮಾಲೀಕರು ಲೋಕಾಯುಕ್ತರ ಪೊಲೀಸರ ನೆರನಿನಿಂದ ಭ್ರಷ್ಟ ಅಧಿಕಾರಿಗಳನ್ನು ರೆಡ್ ಹ್ಯಾಂಡ್‌ಆಗಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಾನೂನನ್ನು ಪಾಲಿಸಬೇಕಾದ ಪೋಲಿಸ್ ಅಧಿಕಾರಿಗಳೇ ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದೆ ಲಂಚಕ್ಕೆ ಕೈಯೊಡ್ಡಿರುವುದು ಪೊಲೀಸ್ ವ್ಯವಸ್ಥೆಯ ದುರವಸ್ಥೆಗೆ ಸಾಕ್ಷಿಯಾಗಿದೆ.
ಆರೋಪಿ ಮೊಹಮ್ಮದ್ ಶರೀಫ್ ಪೊಲೀಸ್ ಸಿಬ್ಬಂದಿ ಪ್ರವೀಣ್ ನಾಯಕ್ ಮತ್ತು ನಾಗರತ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಲೋಕಾಯುಕ್ತ ಪ್ರಭಾರ ಎಸ್ಪಿ ಡಾಕ್ಟರ್ ನಂದಿನಿ ಬಿಎನ್ ಡಿ ವೈ ಎಸ್ ಪಿ ಡಾ. ಗಾನ ಪಿ ಕುಮಾರ್ ಪೋಲಿಸ್ ಇನ್ಸ್ಪೆಕ್ಟರ್ ಅಮಾನುಲ್ಲಾ ಖಾನ್ ಚಂದ್ರಶೇಖರ್ ಕೆ.ಎನ್., ಉಡುಪಿ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ್ ಮತ್ತು ಸಿಬ್ಬಂದಿ ಈ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.