
ದುಬಾರಿಯಾದ 'ಜನನ' ಮತ್ತು 'ಮರಣ' ಪ್ರಮಾಣ ಪತ್ರ ದರ: ಏಕಾಏಕಿ 10 ಪಟ್ಟು ಏರಿದ ಬೆಲೆ
ದುಬಾರಿಯಾದ 'ಜನನ' ಮತ್ತು 'ಮರಣ' ಪ್ರಮಾಣ ಪತ್ರ ದರ: ಏಕಾಏಕಿ 10 ಪಟ್ಟು ಏರಿದ ಬೆಲೆ
ಜನನ ಮತ್ತು ಮರಣ ಪ್ರಮಾಣ ಪತ್ರಗಳ ದರವನ್ನು ಏಕಾಏಕಿ 10 ಪಟ್ಟು ಏರಿಸಲಾಗಿದೆ. ಸಾಮಾನ್ಯವಾಗಿ ಐದು ರೂಪಾಯಿಗೆ ಸಿಗುತ್ತಿದ್ದ ಬರ್ತ್, ಡೆತ್ ಸರ್ಟಿಫಿಕೇಟ್ ಇನ್ನು ಮುಂದೆ ಪ್ರತೀ ಸರ್ಟಿಫಿಕೇಟ್‌ಗೆ 50 ರೂಪಾಯಿ ಪಾವತಿಸಬೇಕಾಗಿದೆ.
ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು ತಿದ್ದುಪಡಿ 2024ರ ಜಾರಿಗೆ ಬಂದ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸ ದರಗಳು ಈಗ ಚಾಲ್ತಿಗೆ ಬಂದಿದೆ.
ಸಾರ್ವಜನಿಕರಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರಗಳು ಹಲವು ಉದ್ದೇಶಗಳಿಗೆ ಬೇಕಾಗುತ್ತದೆ. ಮಕ್ಕಳ ಜನನ ಪ್ರಮಾಣ ಪತ್ರವು ಪೋಷಕರು ಅವರನ್ನು ಶಾಲೆಗೆ ಸೇರಿಸುವಾಗ, ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಗತ್ಯವಾಗಿ ಬೇಕಾಗುತ್ತದೆ.
ಮರಣ ಹೊಂದಿದರೆ ಆ ವ್ಯಕ್ತಿಯ ಮರಣ ಪ್ರಮಾಣಪತ್ರ ಆಸ್ತಿಯ ವಿಲೇವಾರಿ ಸಹಿತ ವಿವಿಧ ಉದ್ದೇಶಗಳಿಗೆ ಬೇಕಾಗುತ್ತದೆ. ಇಂತಹ ದಾಖಲೆಗಳ ಮಹತ್ವವನ್ನು ಮನಗಂಡ ಸರಕಾರ ಜನರ ಮೇಲೆ ಬರೆ ಎಳೆದಿದೆ.
ಹೊಸ ದರವನ್ನು ಪರಿಶೀಲಿಸಲು ಯೋಜನೆ ಮತ್ತು ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಶುಲ್ಕ ಪರಿಷ್ಕರಣೆಯಿಂದ ಸರಕಾರಕ್ಕೆ ಉತ್ತಮ ಆದಾಯ ಲಭ್ಯವಾಗುತ್ತದೆ. ಇಂತಹ ಸರ್ಟಿಫಿಕೇಟ್‌ಗಳು ಕಾಲ ಕಾಲಕ್ಕೆ ಅಗತ್ಯವಿದೆ. ಹಾಗಾಗಿ, ಒಮ್ಮೆಲೇ ಸರಾಸರಿ ಎಂಟರಿಂದ ಹತ್ತು ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸುತ್ತಾರೆ.
ಈ ಮೊದಲು ಐದು ಪ್ರತಿಗಳು ಪಡೆದುಕೊಂಡರೆ 25 ರುಪಾಯಿಗೆ ಸಿಗುತ್ತಿತ್ತು. ಹತ್ತು ಪ್ರತಿಗಳನ್ನು ತೆಗೆದುಕೊಂಡರೆ 50 ರೂ. ಆಗುತ್ತಿತ್ತು. ಈಗ ಐದು ಪ್ರತಿಗೆ ರೂ.250 ಹಾಗೂ 10 ಪ್ರತಿಗೆ 500 ಆಗಿದೆ.
ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಆಗದಿರುವ ಜನನ ಮತ್ತು ಮರಣ ದ ಕುರಿತು ನ್ಯಾಯಾಲಯ ಆದೇಶ ಮೂಲಕ ಪಡೆಯಲಾಗುವ 'ಅಲಭ್ಯ ಪ್ರಮಾಣ ಪತ್ರ'ದ ಶುಲ್ಕ ಹಿಂದೆ ಒಂದು ವರ್ಷಕ್ಕೆ ಎರಡು ರೂಪಾಯಿ ಈಗ 20 ರೂಪಾಯಿಗೆ ಏರಿಸಲಾಗಿದೆ.
ಶುಲ್ಕ ಹೆಚ್ಚಳ ಸಾರ್ವಜನಿಕರಿಗೆ ಹೊರೆಯಾಗಿರುವುದು ನಿಜ. ಈ ಬಗ್ಗೆ ದಿನವೂ ತಕರಾರು ತೆಗೆಯುತ್ತಾರೆ. ಆದರೆ ನಾವು ಸರಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಣ್ಣ ಪುಟ್ಟ ತಿದ್ದುಪಡಿ ಮಾಡಿಸಿದರೂ ಒಂದು ಪ್ರತಿಯನ್ನು ಜನರೇಟ್ ಮಾಡಿ ಪ್ರಿಂಟ್ ಮಾಡಲೇಬೇಕು. ಒಂದು ಪ್ರತಿಗೆ ಈಗ ಅರ್ಜಿದಾರರು 50 ಕೊಡಲೇಬೇಕು ಪ್ರತಿ ಹೆಚ್ಚಾದಷ್ಟು ಶುಲ್ಕ ಜಾಸ್ತಿ ಕೊಡಲೇಬೇಕು ಎನ್ನುತ್ತಾರೆ ನೊಂದವರು.