
ಕೇಂದ್ರ ಸರ್ಕಾರಿ ನೌಕರರ ಜಾತಿ ಪ್ರಮಾಣ ಪರಿಶೀಲಿಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಅಧಿಕಾರವಿದೆ- ಹೈಕೋರ್ಟ್
ಕೇಂದ್ರ ಸರ್ಕಾರಿ ನೌಕರರ ಜಾತಿ ಪ್ರಮಾಣ ಪರಿಶೀಲಿಸಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಅಧಿಕಾರವಿದೆ- ಹೈಕೋರ್ಟ್
ಕೇಂದ್ರ ಸರ್ಕಾರಿ ನೌಕರರ ಜಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಲು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಜಾತಿ ಪ್ರಮಾಣಪತ್ರ ಪರಿಶೀಲನಾ ಕಾರ್ಯವನ್ನು ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ (ಡಿಸಿವಿಸಿ) ವಹಿಸಿಕೊಟ್ಟಿರುವುದು ಕಾನೂನುಬಾಹಿರ ಎಂದು ಆಕ್ಷೇಪಿಸಿ ಹೊಸಪೇಟೆಯ ನೈಋತ್ಯ ರೈಲ್ವೇ ವಲಯದ ನಿವೃತ್ತ ತಾಂತ್ರಿಕ ಸಿಬ್ಬಂದಿ ಸಂಗಪ್ಪ ಎಂ. ಬಾಗೇವಾಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಸಂಭಾವ್ಯ ಕೇಂದ್ರ ಸರ್ಕಾರಿ ಉದ್ಯೋಗಿಗೆ ತಹಶೀಲ್ದಾರ್ ಜಾತಿ ಪ್ರಮಾಣಪತ್ರ ವಿತರಿಸಿದ್ದರೆ, ಅದನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾ ಸಮಿತಿಗೆ ಇದೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ (ನೇಮಕಾತಿಯಲ್ಲಿ ಮೀಸಲು ಇತ್ಯಾದಿ) ಕಾಯ್ದೆ- 1992 ಪ್ರಕಾರವೇ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಜಾತಿಪ್ರಮಾಣಪತ್ರ ಪರಿಶೀಲನೆ ಮಾಡುವ ಅಧಿಕಾರ ನೀಡಲಾಗಿದೆ. ಇದು ಸಂವಿಧಾನದತ್ತವಾಗಿ ನೀಡಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಈ ಕಾರಣದಿಂದ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಲಾಗದು ಎಂದು ನ್ಯಾಯಪೀಠ ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿದೆ.