-->
ಭ್ರಷ್ಟಾಚಾರ ಪ್ರಕರಣ: ಮೇಲ್ನೋಟಕ್ಕೆ ಸಾಬೀತಾಗುವಂತಿದ್ದರೆ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್‌

ಭ್ರಷ್ಟಾಚಾರ ಪ್ರಕರಣ: ಮೇಲ್ನೋಟಕ್ಕೆ ಸಾಬೀತಾಗುವಂತಿದ್ದರೆ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್‌

ಭ್ರಷ್ಟಾಚಾರ ಪ್ರಕರಣ: ಪ್ರಾಥಮಿಕ ತನಿಖೆ ಕಡ್ಡಾಯವಲ್ಲ- ಸುಪ್ರೀಂ ಕೋರ್ಟ್‌






ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ದಾಖಲಾದ ಪ್ರತಿಯೊಂದು ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.


ವಿವರವಾದ ಮತ್ತು ತಾರ್ಕಿಕವಾದ ಮಾಹಿತಿಯುಳ್ಳ ವರದಿಯು ಮೇಲಾಧಿಕಾರಿಗೆ ದೊರೆತಿದ್ದರೆ ಹಾಗೂ ಯಾವುದೇ ವ್ಯಕ್ತಿಯು ಅದನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಅಪರಾಧ ನಡೆದಿದೆ ಎಂದು ಸಾಮಾನ್ಯ ತಿಳುವಳಿಕೆಗೆ ಬರುವುದಿದ್ದರೆ ಅಂತಹ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯ ಅಗತ್ಯವಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.


2014ರ "ಲಲಿತಾ ಕುಮಾರಿ Vs ಉತ್ತರ ಪ್ರದೇಶ ಸರ್ಕಾರ ಪ್ರಕರಣ"ದಲ್ಲಿ ಸಂವಿಧಾನ ನೀಡಿದ್ದ ತೀರ್ಪನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಾಥಮಿಕ ತನಿಖೆ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದು ಪ್ರತಿಯೊಂದು ಪ್ರಕರಣದ ವಾಸ್ತವಾಂಶಗಳು ಮತ್ತು ಆಗಿನ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತದೆ ಎಂದು ಹೇಳಿದೆ.


ಕರ್ನಾಟಕ ಹೈಕೋರ್ಟ್ 2024ರ ಮಾರ್ಚ್‌ 4ರಂದು ನೀಡಿದ್ದ ತೀರ್ಪಿನ ವಿರುದ್ಧ ಹೆಚ್ಚುವರಿ ಅಡ್ವಕೇಟ್ ಜನರಲ್ ನಿಶಾಂತ್ ಪಾಟೀಲ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ನ್ಯಾಯಪೀಠ ಪುರಸ್ಕರಿಸಿ ಈ ತೀರ್ಪು ಹೊರಡಿಸಿದೆ.


ಬೆಂಗಳೂರಿನ ಬೆಸ್ಕಾಂನ ಉಪ ಮಹಾ ವ್ಯವಸ್ಥಾಪಕ (ವಿಜಿಲೆನ್ಸ್) ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಪ್ರತಿವಾದಿ ಟಿ.ಎನ್. ಸುಧಾಕರ್ ರೆಡ್ಡಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 13(1)(b) ಮತ್ತು ಸೆಕ್ಷನ್ 13(2)ರ ಅಡಿಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ದಾಖಲಿಸಿದ್ದ ಎಫ್‌ಐಆರ್‌ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು.


ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯು 2023ರ ಡಿಸೆಂಬರ್ 4ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17ರಡಿಯಲ್ಲಿ ನೇರವಾಗಿ ಎಫ್‌ಐಆರ್ ದಾಖಲಿಸುವ ಮೂಲಕ ಕಡ್ಡಾಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೈಕೋರ್ಟ್‌ ನೀಡಿದ್ದ ತೀರ್ಪು ದೋಷಪೂರಿತವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.





ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್ 17 ಅನ್ವಯವಾಗುವುದು ಪ್ರಕರಣದ ತನಿಖಾ ಪ್ರಕ್ರಿಯೆಗೆ. ಆದರೆ, ಪ್ರಾಥಮಿಕ ಹಂತದ ಎಫ್‌ಐಆರ್‌ ದಾಖಲಾಗಿದೆ ಈ ಸೆಕ್ಷನ್ ಅನ್ವಯವಾಗುವುದಿಲ್ಲ ಎಂದು ಹೇಳಿದೆ. ಕಾನೂನು ಜಾರಿ ಏಜೆನ್ಸಿಗಳ ಮೂಲಭೂತ ಕರ್ತವ್ಯವಾದ ಎಫ್‌ಐಆರ್‌ ದಾಖಲಿಸಲು ಈ ಸೆಕ್ಷನ್ ಅಡ್ಡಿ ಬರುವುದಿಲ್ಲ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ವಿವರಿಸಿದೆ.


ನ್ಯಾಯಯುತವಾದ ತನಿಖೆ ಎಂಬುದನ್ನು ಆರೋಪಿಗಳಿಗೆ ಮಾತ್ರ ಸೀಮಿತ ಎಂದು ವ್ಯಾಖ್ಯಾನಿಸಲಾಗುವುದಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣದ ತನಿಖೆಗೂ ಅವಕಾಶ ಇದೆ ಎಂದಾದಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಸಿಆರ್‌ಪಿಸಿ ನಿಯಮಗಳ ಅಡಿಯಲ್ಲಿ ತನಿಖೆಗೆ ಆದೇಶ ನೀಡಲು ಪೊಲೀಸ್ ವರಿಷ್ಠಾಧಿಕಾರಿಗೆ ಅಧಿಕಾರವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪು ಹಲವು ಪ್ರಕರಣಗಳ ಇತ್ಯರ್ಥಕ್ಕೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದುಪಡಿಸಲು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿ ಪ್ರಕರಣಗಳ ಮೇಲೆ ಈ ತೀರ್ಪು ನೇರವಾಗಿ ಪರಿಣಾಮ ಬೀರಲಿದೆ. 




Ads on article

Advertise in articles 1

advertising articles 2

Advertise under the article