ಸುಪ್ರೀಂ ಮೆಟ್ಟಿಲೇರಿದ್ದ ಚುನಾವಣೆ: ದಾಖಲೆ ಮತಗಳಿಂದ ಪ್ರಕಾಶ್ ನಾಯಕ್ ಪ್ರಚಂಡ ಜಯ- ಜಿಲ್ಲಾ ಸಂಘಕ್ಕೆ ಮರು ಚುನಾವಣೆ ಖಚಿತ?
ಸುಪ್ರೀಂ ಮೆಟ್ಟಿಲೇರಿದ್ದ ಚುನಾವಣೆ: ದಾಖಲೆ ಮತಗಳಿಂದ ಪ್ರಕಾಶ್ ನಾಯಕ್ ಪ್ರಚಂಡ ಜಯ- ಜಿಲ್ಲಾ ಸಂಘಕ್ಕೆ ಮರು ಚುನಾವಣೆ ಖಚಿತ?
ಸುಪ್ರೀಂ ಕೋರ್ಟ್ ಮೆಟ್ಟಲೇರಿ ನಡೆಸಿದ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ದಾಖಲೆ ಮತಗಳಿಂದ ಭರ್ಜರಿ ಜಯಗಳಿಸಿದ ಪ್ರಕಾಶ್ ನಾಯಕ್- ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳ ಹುದ್ದೆಗಳಿಗೆ ಮರು ಚುನಾವಣೆ ಸಾಧ್ಯತೆ ನಿಚ್ಚಳವಾಗಿದೆ.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಮಾಜಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಲೇಬೇಕು ಎನ್ನುವ ಜಿದ್ದಿಗೆ ಬಿದ್ದು ಸುಪ್ರೀಂ ಕೋರ್ಟ್ ವರೆಗೆ ಪ್ರಕರಣವನ್ನು ಒಯ್ದು ಸೋತು ಕರ್ನಾಟಕ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡ ಸಂಘದ ಪದಾಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿ ಕೊನೆಗೂ ನ್ಯಾಯಾಂಗ ನಿಂದನೆಯ ಕುಣಿಕೆಯಿಂದ ತಪ್ಪಿಸಿಕೊಳ್ಳಲು ನಿಶ್ಶ್ಯರ್ಥ ಕ್ಷಮೆಯಾಚಿಸಿ ಚುನಾವಣೆ ನಡೆಸುತ್ತೇವೆ ಎಂದು ಹೈಕೋರ್ಟಿಗೆ ನೀಡಿದ ವಾಗ್ದಾನದಂತೆ ದಿನಾಂಕ 25.2.2027ರಂದು ಚುನಾವಣೆ ನಡೆಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ 250 ಮತಗಳಲ್ಲಿ 202 ರಷ್ಟು ದಾಖಲೆ ಮತಗಳನ್ನು ಪಡೆಯುವುದರ ಮೂಲಕ ಪ್ರಕಾಶ್ ನಾಯಕ್ ರವರು ಭರ್ಜರಿ ಜಯಗಳಿಸಿದ್ದಾರೆ. ಸ್ಪರ್ಧಿಸಿದ ಇತರ ಅಭ್ಯರ್ಥಿಗಳಾದ ಶ್ರೀ ನಾಗಪ್ಪ ಕೊಳದನ್ನವರ್ ಮತ್ತು ಶ್ರೀಮತಿ ಸಬಿತಾ ಸೆರಾವೋ ಅವರು ಕ್ರಮವಾಗಿ 129 ಮತ್ತು 120 ಮತಗಳನ್ನು ಪಡೆದರು.
ಒಂದೇ ಕುಟುಂಬದ ಸದಸ್ಯರಂತಿದ್ದ ನ್ಯಾಯಾಂಗ ಇಲಾಖೆಯ ನೌಕರರ ನಡುವೆ ಒಡಕು ಉಂಟುಮಾಡಲು ಯತ್ನಿಸಿದವರಿಗೆ ನ್ಯಾಯಾಂಗ ಇಲಾಖೆಯ ಪ್ರಜ್ಞಾವಂತ ಮತದಾರರು ಸೂಕ್ತ ಪಾಠ ಕಲಿಸಿದ್ದಾರೆ.
ಜಿಲ್ಲಾ ಸಂಘದ ಪದಾಧಿಕಾರಿಗಳ ಆಯ್ಕೆಗೆ ನ್ಯಾಯಾಂಗ ಇಲಾಖೆಯನ್ನು ಪ್ರತಿನಿಧಿಸಬೇಕಾದ ನಿರ್ದೇಶಕರುಗಳನ್ನು ಹಾಗೂ ಮುಲ್ಕಿ ತಾಲೂಕು ಸಂಘವನ್ನು ಪ್ರತಿನಿಧಿಸಬೇಕಾದ ತಾಲೂಕು ಶಾಖೆಯ ಅಧ್ಯಕ್ಷರನ್ನು ಹೊರತುಪಡಿಸಿ ಅಕ್ರಮವಾಗಿ ಚುನಾವಣೆ ನಡೆಸಲಾಗಿತ್ತು. ಇದೀಗ ಮುಲ್ಕಿ ತಾಲೂಕು ಶಾಖೆಯ ಅಧ್ಯಕ್ಷರ ಹಾಗೂ ನ್ಯಾಯಾಂಗ ಇಲಾಖೆ ನಿರ್ದೇಶಕರುಗಳ ಆಯ್ಕೆ ನಡೆದಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಹುದ್ದೆಗಳಿಗೆ ಚುನಾವಣೆ ನಡೆಸತಕ್ಕದ್ದಾಗಿದೆ.
ಪದಾಧಿಕಾರಿಗಳ ಹುದ್ದೆಗೆ ಚುನಾವಣೆ ನಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಭ್ಯರ್ಥಿ ರಾಜ್ಯ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸಲು ಬಯಸಿದ್ದಲ್ಲಿ ರಾಜ್ಯ ಪದಾಧಿಕಾರಿಗಳ ಹುದ್ದೆಗಳಿಗೂ ಚುನಾವಣೆ ನಡೆಯುವ ಸಾಧ್ಯತೆಗಳಿವೆ.