
ಗ್ರಾ.ಪಂ. ಅಧ್ಯಕ್ಷ/ಉಪಾಧ್ಯಕ್ಷರ ರಾಜೀನಾಮೆ: ನಿಯಮ ಪಾಲಿಸಿದರೆ ಮಾತ್ರ ಅಂಗೀಕಾರ- ಕರ್ನಾಟಕ ಹೈಕೋರ್ಟ್
ಗ್ರಾ.ಪಂ. ಅಧ್ಯಕ್ಷ/ಉಪಾಧ್ಯಕ್ಷರ ರಾಜೀನಾಮೆ: ನಿಯಮ ಪಾಲಿಸಿದರೆ ಮಾತ್ರ ಅಂಗೀಕಾರ- ಕರ್ನಾಟಕ ಹೈಕೋರ್ಟ್
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಅದಕ್ಕೆ ಸಂಬಂಧಿಸಿದ ಕಾರಣಗಳ ಬಗ್ಗೆ ವಿಚಾರ ನಡೆಸಿ ರಾಜೀನಾಮೆ ಸಲ್ಲಿಸಿದ 10 ದಿನಗಳ ಬಳಿಕವಷ್ಟೇ ಉಪ ವಿಭಾಗಾಧಿಕಾರಿಗಳು ಅಂಗೀಕರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ರಾಜೀನಾಮೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದೆ ಉಪಾಧ್ಯಕ್ಷರ ರಾಜೀನಾಮೆಯನ್ನು ಅಂಗೀಕರಿಸಿದ ಉಪ ವಿಭಾಗಾಧಿಕಾರಿಗಳು ಅವರ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಘಟನೆಯ ವಿವರ
ಬೆಳಗಾವಿ ಜಿಲ್ಲೆಯ ಅಥಣಿ ಗ್ರಾಮ ಕೊಹಾಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಮಾಲಗೌಡ ಅವರು ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಯನ್ನು ಯಾವುದೇ ವಿಚಾರಣೆ ನಡೆಸದೆ ತರಾತುರಿಯಲ್ಲಿ ಉಪ ವಿಭಾಗಾಧಿಕಾರಿಯವರು ಅಂಗೀಕರಿಸಿದ್ದರು. ಉಪವಿಭಾಗಾಧಿಕಾರಿ ಅವರ ಕ್ರಮವನ್ನು ಪ್ರಶ್ನಿಸಿ ರಾಜೀನಾಮೆ ನೀಡಿದ್ದ ಮಾಲ ಗೌಡ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು.
ಈ ಅರ್ಜಿಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು. ನಿಯಮಗಳ ಪ್ರಕಾರ ರಾಜೀನಾಮೆ ಸಲ್ಲಿಸಿದ ದಿನವನ್ನು ಹೊರತುಪಡಿಸಿ, ನಂತರದ 10 ದಿನಗಳು ಎಂಬುದಾಗಿ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಆ 10 ದಿನಗಳು ಗತಿಸುವ ಮುನ್ನವೇ ರಾಜೀನಾಮೆ ಅಂಗೀಕರಿಸಲಾಗಿದ್ದು, ಈ ಆದೇಶವನ್ನು ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ರಾಜೀನಾಮೆ ನೀಡಿದ ಬಳಿಕ ಅದಕ್ಕೆ ನೀಡಿದ ಕಾರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕು ಎಂದು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 48 ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ ರಾಜೀನಾಮೆ ಅಂಗೀಕರಿಸುವ ಸಂದರ್ಭದಲ್ಲಿ ಬೆದರಿಕೆ ಯಾ ಒತ್ತಡ ಹೇರಲಾಗಿದೆಯೇ ಎಂಬುದನ್ನು ಸಕ್ಷಮ ಪ್ರಾಧಿಕಾರ ಪರಿಗಣಿಸಬೇಕು.
ಈ ಕಾರ್ಯ ಮಾಡದೆ ಡಿಸೆಂಬರ್ 16 2024 ರಂದು ಸಲ್ಲಿಸಿರುವ ರಾಜೀನಾಮೆ ಯಾವುದೇ ಪರಿಶೀಲನೆ ನಡೆಸದೆ ಅಂಗೀಕರಿಸಿ ಆದೇಶಿಸಲಾಗಿದೆ. ಹೀಗಾಗಿ ಈ ಆದೇಶವನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯ ಪೀಠ ಹೇಳಿದೆ.
ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಹುದ್ದೆಗೆ ರಾಜೀನಾಮೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 48 (1) ಅಡಿಯಲ್ಲಿ ಅಗತ್ಯ ಪರಿಶೀಲನೆ ಮಾಡಬೇಕು. ಈ ಎರಡು ವಿಷಯಗಳನ್ನು ಸದ್ರಿ ಪ್ರಕರಣದಲ್ಲಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂಬುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.