
ತಲೆ ಮರೆಸಿಕೊಂಡಿದ್ದ ಅಪರಾಧಿಗೆ ಮಾಹಿತಿ ಇಲ್ಲದೆ ಆಶ್ರಯ ನೀಡಿದರೆ ತಪ್ಪೇ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ತಲೆ ಮರೆಸಿಕೊಂಡಿದ್ದ ಅಪರಾಧಿಗೆ ಮಾಹಿತಿ ಇಲ್ಲದೆ ಆಶ್ರಯ ನೀಡಿದರೆ ತಪ್ಪೇ..?: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ, ತನ್ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡಿದ್ದ ವೇಳೆ, ಈ ಅಪರಾಧಿಗೆ ಮಾಹಿತಿ ಇಲ್ಲದೆ ಆಶ್ರಯ ನೀಡಬಹುದೇ ಎಂಬ ಅಂಶದ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯೊಬ್ಬನಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಮಂಗಳೂರು ಪೊಲೀಸರು ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಉದಯಕುಮಾರ್ ಶೆಟ್ಟಿ Vs ಕರ್ನಾಟಕ ಸರಕಾರ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರಿಂದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಭಾರತೀಯ ದಂಡ ಸಮಿತಿ ಐಪಿಸಿ ಸೆಕ್ಷನ್ 216ರ ಅಡಿಯಲ್ಲಿ (ಅಪರಾಧಿಗೆ ಉದ್ದೇಶಪೂರ್ವಕವಾಗಿ ಆಶ್ರಯ ನೀಡುವುದು) ಪ್ರಕರಣ ದಾಖಲಿಸಬೇಕಾದರೆ ಆಶ್ರಯ ನೀಡಿದ ವ್ಯಕ್ತಿಗೆ ಅಪರಾಧಿಯು ಶಿಕ್ಷೆಗೆ ಗುರಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಇದರ ಜೊತೆಗೆ ಉದ್ದೇಶಪೂರ್ವಕವಾಗಿ ಅಪರಾಧಿಗೆ ಆತ ಆಶ್ರಯ ನೀಡಿರಬೇಕು. ಈ ಅಂಶವನ್ನುಸಾಬೀತುಪಡಿಸುವಂತಹ ಅಂಶಗಳು ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳು ಇರಬೇಕು ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್‌ಗಳ ದಾಖಲೆಗಳು ಲಭ್ಯವಾಗಿದೆ. ಅದರಂತೆ ಉದ್ದೇಶಪೂರ್ವಕವಾಗಿ ಅರ್ಜಿದಾರರು ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸೂಚಿಸುವ ಯಾವುದೇ ಸಂದೇಶ ಅಥವಾ ಮಾತುಕತೆಗಳು ನಡೆದಿಲ್ಲ ಎಂಬುದನ್ನು ನ್ಯಾಯಪೀಠ ಗಮನಿಸಿತು.
ಅರ್ಜಿದಾರರ ಮನೆಯಿಂದ ಅಪರಾಧಿಯನ್ನು ಬಂಧಿಸಲಾಗಿದೆ ಎಂಬ ಅಂಶವನ್ನು ಬಿಟ್ಟರೆ, ಅರ್ಜಿದಾರರಿಗೆ ಅಪರಾಧಿಯ ಶಿಕ್ಷೆಯ ಬಗ್ಗೆ ತಿಳಿದಿತ್ತು ಮತ್ತು ಅವರು ಉದ್ದೇಶಪೂರ್ವಕವಾಗಿ ಅಪರಾಧಿಗೆ ಆಶ್ರಯ ನೀಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ವಿರುದ್ಧ ಕಾನೂನು ಕ್ರಮಗಳನ್ನು ಮುಂದುವರಿಸಿದರೆ, ಅದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಮಂಗಳೂರಿನಲ್ಲಿ ನಡೆದಿದ್ದ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ನಟೋರಿಯಸ್ ಕ್ರಿಮಿನಲ್ ಶರಣ್ ಆಲಿಯಾಸ್ ಶರಣ್ ಪೂಜಾರಿ ಎಂಬಾತನಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಕೂಡ ದೃಢಪಡಿಸಿತ್ತು.
ಶಿಕ್ಷೆಯಿಂದ ತಪ್ಪಿಸಲು ತಲೆ ಮರೆಸಿಕೊಂಡಿದ್ದ ಅಪರಾಧಿ ಶರಣ್‌ನನ್ನು ಬಂಧಿಸಲು ಬರ್ಕೆ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಅಂತಿಮವಾಗಿ ಉದಯ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಬರ್ಕೆ ಪೊಲೀಸರಿಗೆ ಅಪರಾಧಿ ಶರಣ್ ಸಿಕ್ಕಿಬಿದ್ದಿದ್ದ.
ನಂತರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗೆ ಆಶ್ರಯ ನೀಡಿದ್ದ ಆರೋಪದಡಿ ಉದಯ್ ಕುಮಾರ್ ಶೆಟ್ಟಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಉದಯ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಪರಾಧಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಾಧಾರಗಳು ಇಲ್ಲ. ಈ ಬಗ್ಗೆ ತನಿಖಾಧಿಕಾರಿ ಯಾವುದೇ ಸಾಕ್ಷಿಗಳನ್ನು ಹಾಜರುಪಡಿಸಿಲ್ಲ ಎಂಬುದನ್ನು ಅರ್ಜಿದಾರರ ಪರ ವಾದಿಸಿದ ವಕೀಲರು ಹೇಳಿದರು.
ಅರ್ಜಿದಾರರ ಮನೆಗೆ ಅಪರಾಧಿ ಬಂದಾಗ ಆತನಿಗೆ ಶಿಕ್ಷೆ ಆಗಿರುವ ಬಗ್ಗೆ ಯಾವುದೇ ಮಾಹಿತಿ ಅರ್ಜಿದಾರರಿಗೆ ಇರಲಿಲ್ಲ. ಹೀಗಾಗಿ ಅವರು ಆಶ್ರಯ ನೀಡಿದ್ದರು ಎಂದು ಅರ್ಜಿದಾರರ ಪರ ವಾದ ಮಂಡಿಸಲಾಗಿತ್ತು
ಪ್ರಕರಣ: ಉದಯ್ ಕುಮಾರ್ ಶೆಟ್ಟಿ Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, Crl.Pet. 14164/2024 Dated 17-01-2025