
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಹೈಕೋರ್ಟ್ ಛೀಮಾರಿ! ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ಚುನಾವಣಾಧಿಕಾರಿಗಳಿಗೆ ತೀವ್ರ ಮುಖಭಂಗ
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಹೈಕೋರ್ಟ್ ಛೀಮಾರಿ! ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು, ಚುನಾವಣಾಧಿಕಾರಿಗಳಿಗೆ ತೀವ್ರ ಮುಖಭಂಗ
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಮತ್ತು ಪದಾಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ
ನ್ಯಾಯಾಂಗ ಆದೇಶ ಉಲ್ಲಂಘಿಸಿದವರಿಂದ ನಿಶ್ಶ್ಯರ್ಥ ಕ್ಷಮಾಯಾಚನೆ
ದಿನಾಂಕ 27.2.2025 ರೊಳಗೆ ನ್ಯಾಯಾಂಗ ಇಲಾಖೆಯ ಮತಕ್ಷೇತ್ರದ ಚುನಾವಣೆ ನಡೆಸುವಂತೆ ತಾಕೀತು
ಮಾನ್ಯ ಕರ್ನಾಟಕ ಹೈಕೋರ್ಟ್ ನಿಂದ ದಿನಾಂಕ ನಿಗದಿಪಡಿಸಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಸ್ಥಾನಕ್ಕೆ ನ್ಯಾಯಾಂಗ ಇಲಾಖೆಯ ಪ್ರತಿನಿಧಿಗಳ ಆಯ್ಕೆಗೆ ಮತಕ್ಷೇತ್ರ ಸಂಖ್ಯೆ 47 ರ ಚುನಾವಣೆಯನ್ನು ನಡೆಸುವಂತೆ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಪಾಲಿಸದೆ ತಮ್ಮ ಇಷ್ಟಾನುಸಾರ ನೂತನ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ ಮತ್ತು ಪದಾಧಿಕಾರಿಗಳ ಕೃತ್ಯವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ನ್ಯಾಯಾಂಗ ನಿಂದನೆ ಎಸಗಿದ ಚುನಾವಣಾ ಅಧಿಕಾರಿ ಮತ್ತು ಪದಾಧಿಕಾರಿಗಳು ಮಾನ್ಯ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಪ್ರಕಾಶ್ ನಾಯಕ್ ಅವರು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲೇಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಸಂಘದ ಪದಾಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗೆ ದಿನಾಂಕ 12.2.2025 ರಂದು ಮಾನ್ಯ ಹೈಕೋರ್ಟ್ ಹೊರಡಿಸಿದ ಆದೇಶದಿಂದ ತೀವ್ರ ಮುಖಭಂಗವಾಗಿದೆ.
2015 ರಿಂದ 2019 ರ ಅವಧಿಯಲ್ಲಿ ದ.ಕ. ಜಿಲ್ಲಾ ಸಂಘದ ಅಧ್ಯಕ್ಷರಾಗಿದ್ದ ಪ್ರಕಾಶ್ ನಾಯಕ್ ಅವರ ಅವಧಿಯಲ್ಲಿ ಮಂಗಳೂರು ನಗರ ಬಿ ದರ್ಜೆಗೆ ಏರಿಸಲ್ಪಟ್ಟಿತು. 5 ವರ್ಷಗಳ ಅವಧಿ ಮುಗಿದ ಕೂಡಲೇ ವೇತನ ಪರಿಷ್ಕರಣೆಯಾಯಿತು. ಸಂಪನ್ಮೂಲ ಕ್ರೋಢೀಕರಣ ಹಾಗೂ ಅಭಿವೃದ್ಧಿ ಕಾರ್ಯ ಕೈಗೊಂಡು ದ.ಕ. ಜಿಲ್ಲಾ ಸಂಘವನ್ನು ರಾಜ್ಯದಲ್ಲೇ ಅತ್ಯಂತ ಸಂಪತ್ಭರಿತ ಸಂಘವನ್ನಾಗಿ ಮಾಡಲಾಯಿತು. ಸಂಘದ ಸಂಪನ್ಮೂಲಗಳನ್ನು ದೋಚುವ ಏಕೈಕ ಉದ್ದೇಶದಿಂದ ಮುಂದಿನ ಅವಧಿಗೆ ನಡೆದ ಚುನಾವಣೆಯಲ್ಲಿ ಹಲವಾರು ಅಕ್ರಮಗಳನ್ನು ಎಸಗಿ ಸಂಘದ ಅಧಿಕಾರವಹಿಸಿಕೊಂಡ ತಂಡದ ವಿರುದ್ಧ ಕಾನೂನು ಹೋರಾಟ ನಡೆಸಿದ ಪರಿಣಾಮವಾಗಿ ಚುನಾವಣೆಯು ಅಸಿಂಧು ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟು ಸಂಘದ ಹಣ ದುರುಪಯೋಗ ಪಡಿಸಿದ ಪದಾಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಮಂಗಳೂರಿನ ಮಾನ್ಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಹೊಸ ಚುನಾವಣೆ ನಡೆಸುವ ಬದಲು ಅಕ್ರಮವಾಗಿ ಅಧಿಕಾರಕ್ಕೆ ಅಂಟಿಕೊಂಡು 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು.
ಪ್ರಕಾಶ್ ನಾಯಕ್ ರವರು 2024-29ರ ಅವಧಿಯಲ್ಲಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದಲ್ಲಿ ಕೋಟ್ಯಂತರ ರೂಪಾಯಿಗಳ ಹಣ ದುರುಪಯೋಗದ ತಮ್ಮ ಹಗರಣ ಬಯಲಿಗೆ ಬರುವ ಭೀತಿಯಿಂದ ಹಾಗೂ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸಂಘದ ಹೆಸರಿನಲ್ಲಿದ್ದ ಸ್ಥಿರಾಸ್ತಿ ಸರಕಾರದ ಪಾಲಾದ ವಿಷಯ ಬಯಲಿಗೆ ಬರುವ ಭಯದಿಂದ ಯಾವುದೇ ಬೆಲೆ ತೆತ್ತಾದರೂ ಪ್ರಕಾಶ್ ನಾಯಕ್ ಅವರನ್ನು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸದಂತೆ ಮಾಡುವ ಒಳಸಂಚು ರೂಪಿಸಲಾಯಿತು.
ಸಂಘ ವಿರೋಧಿ ಚಟುವಟಿಕೆಗಳ ಕಾರಣ ನೀಡಿ ಪ್ರಕಾಶ್ ನಾಯಕ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಹಾಗೂ ಮತದಾನ ಮಾಡದಂತೆ ಕಾನೂನುಬಾಹಿರ ಷರಾವನ್ನು ಮತದಾರರ ಪಟ್ಟಿಯಲ್ಲಿ ನಮೂದಿಸಿದರು. ಸದರಿ ಷರಾ ರದ್ದುಪಡಿಸುವಂತೆ ಕೋರಿ ಪ್ರಕಾಶ್ ನಾಯಕ್ ಅವರು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಹೂಡಿದ ದಾವೆಯಲ್ಲಿ ಉಭಯ ಪಕ್ಷಕಾರರು ವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಪ್ರಕಾಶ್ ನಾಯಕ್ ಅವರಿಗೆ ತನ್ನನ್ನು ಸಮರ್ಥಿಸುವ ಅವಕಾಶ ನೀಡದೆ, ಯಾವುದೇ ವಿಚಾರಣೆ ನಡೆಸದೆ ಹೊರಡಿಸಿದ ಏಕ ಪಕ್ಷಿಯ ಆದೇಶ ನಿರಂಕುಶವಾಗಿರುವುದರಿಂದ ಪ್ರಕಾಶ್ ನಾಯಕ್ ಅವರಿಗೆ ಮತದಾನ ಮಾಡಲು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಆದೇಶಿಸಿತು.
ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಚುನಾವಣಾ ಅಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಯಿತು. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಹೆದರಿದ ಚುನಾವಣಾಧಿಕಾರಿ ದಿನಾಂಕ 16-11-2024 ರಂದು ನಡೆಯಲಿರುವ ಚುನಾವಣೆಯಲ್ಲಿ ಪ್ರಕಾಶ್ ನಾಯಕ್ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದರು.
ದಿನಾಂಕ 16-11-2024ರಂದು ಮತದಾನ ಮಾಡಲು ಬಂದ ನ್ಯಾಯಾಂಗ ಇಲಾಖೆಯ ನೌಕರರಿಗೆ ಮತದಾನಕ್ಕೆ ಅವಕಾಶ ನೀಡಲಿಲ್ಲ. ಕಾರಣ ಕೇಳಿದಾಗ ಚುನಾವಣಾ ಅಧಿಕಾರಿ ರಾಜೀನಾಮೆ ನೀಡಿದ್ದಾರೆ ಅವರ ಸ್ಥಾನಕ್ಕೆ ಬಂದ ಹೊಸ ಚುನಾವಣಾ ಅಧಿಕಾರಿ ಸ್ಪಷ್ಟೀಕರಣ ಕೋರಿ ರಾಜ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಲಾಯಿತು.
ಈತನ್ಮಧ್ಯೆ ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಾಯಿತು. ಇನ್ನೋರ್ವ ಅಭ್ಯರ್ಥಿ ಶ್ರೀಮತಿ ಸಬಿತಾ ಸೆರಾವೋ ಅವರು ತನಗೆ ಜಿಲ್ಲಾ ಪದಾಧಿಕಾರಿಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಸಲುವಾಗಿ ದಿನಾಂಕ 26-11-2024ರ ಒಳಗೆ ಚುನಾವಣೆ ನಡೆಸುವಂತೆ ಚುನಾವಣಾ ಅಧಿಕಾರಿಗೆ ಅಜ್ಞಾಪಕ ನಿರ್ಬಂಧಕಾಜ್ಞೆ ನೀಡುವಂತೆ ಕೋರಿ ದಾವೆ ಹೂಡಿದರು. ಮನವಿಯನ್ನು ಪುರಸ್ಕರಿಸಿದ ಮಾನ್ಯ ನ್ಯಾಯಾಲಯವು ದಿನಾಂಕ 26 -11-2024 ರೊಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತು. ಮಾನ್ಯ ನ್ಯಾಯಾಲಯದ ಆದೇಶವನ್ನು ಪಾಲಿಸುವ ಬದಲು ಚುನಾವಣಾ ಅಧಿಕಾರಿ ಹಾಗೂ ಸಂಘದ ಕಾರ್ಯದರ್ಶಿಯವರು ಸದರಿ ಆದೇಶದ ವಿರುದ್ಧ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ದಾಖಲಿಸಿ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದರು.
ದಿನಾಂಕ 13.12.2024ರಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಪಡೆದು ನ್ಯಾಯಾಂಗ ಇಲಾಖೆಯ ನೌಕರರನ್ನು ಮತದಾನದ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿದ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ತಪ್ಪಿತಸ್ಥರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸಿ ದಿನಾಂಕ 27.12.2024ರ ಒಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿತು. ದಂಡದ ಹಣವನ್ನು ಕಾರ್ಕಳದ ಹೊಸ ಬೆಳಕು ಅನಾಥ ವೃದ್ಧಾಶ್ರಮಕ್ಕೆ ನೀಡುವಂತೆ ಆದೇಶಿಸಿತು.
ಮಾನ್ಯ ಹೈಕೋರ್ಟ್ ನ ಆದೇಶವನ್ನು ಪಾಲಿಸುವ ಬದಲು ಸಂಘವು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಅನುಮತಿ ಅರ್ಜಿ ಸಲ್ಲಿಸಿತು. ಸದರಿ ಅರ್ಜಿಯನ್ನು ಅಂಗೀಕಾರ ಹಂತದಲ್ಲಿಯೇ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ದಂಡದ ಹಣವನ್ನು ಮನ್ನಾ ಮಾಡಬೇಕೆಂಬ ಕೋರಿಕೆಯನ್ನು ತಳ್ಳಿ ಹಾಕಿ ಚುನಾವಣೆ ನಡೆಸಲು ದಿನಾಂಕವನ್ನು ಹೈಕೋರ್ಟ್ ನಿಂದ ಪಡೆದು ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿತು.
ಮಾನ್ಯ ಸುಪ್ರೀಂ ಕೋರ್ಟ್ ಆದೇಶವನ್ನು ಕೂಡ ಉಲ್ಲಂಘಿಸಿದ ಚುನಾವಣಾ ಅಧಿಕಾರಿ ಮತ್ತು ಸಂಘವು ತನ್ನ ಇಷ್ಟಾನುಸಾರ ನೂತನ ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿ ಪ್ರಕಾಶ್ ನಾಯಕ್ ಮತ್ತು ಸಬಿತಾ ಸೆರಾವೋ ಅವರ ಹೆಸರುಗಳನ್ನು ಅಭ್ಯರ್ಥಿಗಳ ಪಟ್ಟಿಯಿಂದ ವಿರಹಿತಪಡಿಸಿತು. ಬಾಧಿತರಾದ ಅಭ್ಯರ್ಥಿಗಳು ಈ ವಿಷಯವನ್ನು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಲಯದ ಅವಗಾಹನೆಗೆ ತಂದಾಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟಿನಿಂದ ದಿನಾಂಕ ನಿಗದಿಪಡಿಸಿ ಚುನಾವಣೆ ನಡೆಸುವಂತೆ ಮಾನ್ಯ ನ್ಯಾಯಾಲಯ ಆದೇಶಿಸಿತು.
ತನ್ನ ಆದೇಶವನ್ನು ಪಾಲಿಸಿ ದಿನಾಂಕ 16.1.2025 ರೊಳಗೆ ಪಾಲನಾ ವರದಿಯನ್ನು ನೀಡದ ಸಂಘ ಹಾಗೂ ಚುನಾವಣಾ ಅಧಿಕಾರಿಯ ವಿರುದ್ಧ ಮಾನ್ಯ ಹೈಕೋರ್ಟ್ ಶೋಕಾಸ್ ನೋಟಿಸ್ ಹಾಗೂ ವಾರಂಟನ್ನು ಹೊರಡಿಸಿತು. ದಿನಾಂಕ 12.2.2025 ರಂದು ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನೂತನ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಮೂಲಕ ಚುನಾವಣಾ ಅಧಿಕಾರಿ ಹಾಗೂ ಸಂಘವು ಮಾನ್ಯ ಸುಪ್ರೀಂಕೋರ್ಟ್ ನ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂಬ ನಿಷ್ಕರ್ಷೆಗೆ ಬಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದಾಗ ತಮ್ಮ ಕೃತ್ಯದ ಬಗ್ಗೆ ಪಶ್ಚಾತಾಪ ಪಡುತ್ತಾ ನಿಶ್ಚ್ಯರ್ಥ ಕ್ಷಮೆ ಯಾಚಿಸಿದ ಅರ್ಜಿದಾರರಿಗೆ ದಿನಾಂಕ 12.2.2025 ರಿಂದ 15 ದಿನಗಳ ಒಳಗೆ ಹಿಂದಿನ ಚುನಾವಣಾ ವೇಳಾಪಟ್ಟಿ ಪ್ರಕಾರ ಚುನಾವಣಾ ಪ್ರಕ್ರಿಯೆ ನಿಲುಗಡೆಯಾದ ಹಂತದಿಂದ ಚುನಾವಣೆ ನಡೆಸುವಂತೆ ನಿರ್ದೇಶಿಸಿತು. ದಂಡದ ಹಣದ ಪೈಕಿ ಮೂರು ಲಕ್ಷ ರೂಪಾಯಿ ಈಗಾಗಲೇ ಪಾವತಿಸಲಾಗಿದ್ದು ಉಳಿದ ಎರಡು ಲಕ್ಷ ರೂಪಾಯಿಯನ್ನು ಮನ್ನಾ ಮಾಡಬೇಕೆಂಬ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿತು. ದಿನಾಂಕ 10.03.2025 ರ ಒಳಗೆ ಚುನಾವಣೆ ನಡೆಸಿ ದಂಡದ ಹಣವನ್ನು ಪಾವತಿಸಿದ ಬಗ್ಗೆ ಪಾಲನಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತು.
ನ್ಯಾಯಾಂಗ ಇಲಾಖೆಯ ಮತಕ್ಷೇತ್ರ ಸಂಖ್ಯೆ 47ರ ಚುನಾವಣೆ ನಡೆದ ಬಳಿಕ ಜಿಲ್ಲಾ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಸತಕ್ಕದ್ದಾಗಿದೆ.
ಪ್ರಕಾಶ್ ನಾಯಕ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಸಲುವಾಗಿ ಈಗಾಗಲೇ 10 ಲಕ್ಷಕ್ಕೂ ಅಧಿಕ ಹಣವನ್ನು ದುರ್ವ್ಯಯ ಮಾಡಿರುವುದಾಗಿ ತಿಳಿದುಬಂದಿದೆ. ತಮ್ಮ ಸ್ವಾರ್ಥಕ್ಕಾಗಿ, ಅನಗತ್ಯ ಕಾನೂನು ಹೋರಾಟಕ್ಕೆ, ಮಂಗಳೂರಿನ ಸಿವಿಲ್ ನ್ಯಾಯಾಲಯದಿಂದ ಹಿಡಿದು ಹೈಕೋರ್ಟ್, ಸುಪ್ರೀಂ ಕೋರ್ಟ್ ವರೆಗಿನ ವಕೀಲರಿಗೆ ಈಗಾಗಲೇ ನೀಡಿರುವ ಲಕ್ಷಾಂತರ ರೂಪಾಯಿ ವೃತ್ತಿ ಶುಲ್ಕ ಹಾಗೂ ಹೈಕೋರ್ಟಿಗೆ ತಪ್ಪು ಮಾಹಿತಿ ನೀಡಿ ದಂಡದ ಹಣವನ್ನು ಪಾವತಿಸಲು ಕಾರಣಕರ್ತರಾದವರಿಂದ ವೈಯಕ್ತಿಕವಾಗಿ ಈ ಬೃಹತ್ ಮೊತ್ತವನ್ನು ವಸೂಲು ಮಾಡಬೇಕೆಂಬುದು ಜಿಲ್ಲೆಯ ಪ್ರಜ್ಞಾವಂತ ನೌಕರರ ಅಭಿಮತವಾಗಿದೆ.
ಚುನಾವಣಾ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಮಲಿಂಗಪ್ಪ ಅವರು ನೀಡಿದ ಆದೇಶವನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವಾದ ಮಾನ್ಯ ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಗಮನಾರ್ಹ ವಿಷಯವಾಗಿದೆ.