-->
ನ್ಯಾಯಾಂಗ ನೌಕರರಿಗೆ ಭರವಸೆಯ ಬೆಳಕಾದ ನ್ಯಾ. ಅರವಿಂದ್ ಕುಮಾರ್ ಸ್ಪೂರ್ತಿಯುತ ಮಾತು: ನ್ಯಾಯಾಂಗ ನೌಕರರ ರಾಜ್ಯ ಸಮ್ಮೇಳನ

ನ್ಯಾಯಾಂಗ ನೌಕರರಿಗೆ ಭರವಸೆಯ ಬೆಳಕಾದ ನ್ಯಾ. ಅರವಿಂದ್ ಕುಮಾರ್ ಸ್ಪೂರ್ತಿಯುತ ಮಾತು: ನ್ಯಾಯಾಂಗ ನೌಕರರ ರಾಜ್ಯ ಸಮ್ಮೇಳನ

ನ್ಯಾಯಾಂಗ ನೌಕರರಿಗೆ ಭರವಸೆಯ ಬೆಳಕಾದ ನ್ಯಾ. ಅರವಿಂದ್ ಕುಮಾರ್ ಸ್ಪೂರ್ತಿಯುತ ಮಾತು: ನ್ಯಾಯಾಂಗ ನೌಕರರ ರಾಜ್ಯ ಸಮ್ಮೇಳನ





ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠ ವೇತನ ಹಾಗೂ ಸೇವಾ ಸೌಲಭ್ಯಗಳನ್ನು ಪಡೆಯುತ್ತಿರುವ ಕರ್ನಾಟಕ ರಾಜ್ಯ ನ್ಯಾಯಾಂಗ ನೌಕರರಲ್ಲಿ ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಅರವಿಂದ ಕುಮಾರ್ ಅವರ ಮಾತುಗಳು ಹೊಸ ಭರವಸೆಯ ಬೆಳಕು ಮೂಡಿಸಿದೆ.


ದಿನಾಂಕ 23.2.2025 ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜರಗಿದ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯ ನೌಕರರ ಎಂಟನೆಯ ರಾಜ್ಯಮಟ್ಟದ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಮೂರ್ತಿಗಳು ನ್ಯಾಯಾಂಗ ಇಲಾಖೆಯ ನೌಕರರು ನ್ಯಾಯಾಂಗ ಸೌಧದ ಆಧಾರ ಸ್ತಂಭಗಳು. ನೌಕರರಿಲ್ಲದೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ನ್ಯಾಯಾಂಗ ನೌಕರರು ಪ್ರಾಮಾಣಿಕ ದಕ್ಷ ಹಾಗೂ ಸಮರ್ಪಣಾ ಭಾವದ ಸೇವೆಗೆ ಹೆಸರಾಗಿದ್ದಾರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಶ್ರೇಷ್ಠ ಕೆಲಸವನ್ನು ಮಾಡುವ ಗುಣವನ್ನು ಈಗಿನ ಯುವ ನೌಕರರು ಅಳವಡಿಸಿಕೊಳ್ಳಬೇಕು ಎಂದರು.


ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟಿನಲ್ಲಿ ವಕೀಲ ವೃತ್ತಿಯನ್ನು ಕೈಗೊಳ್ಳುವ ಸಂದರ್ಭದಲ್ಲಿ ನ್ಯಾಯಾಂಗ ನೌಕರರ ಒತ್ತಡಮಯ ಕೆಲಸ ಕಾರ್ಯಗಳನ್ನು ಹತ್ತಿರದಿಂದ ನೋಡಿದ ತಮಗೆ ಅವರ ಕಷ್ಟಗಳ ಬಗ್ಗೆ ಅರಿವಿದೆ. ಕಚೇರಿ ಅವಧಿ ಪ್ರಾರಂಭವಾಗುವ ಮುಂಚೆ ಕಚೇರಿಗೆ ಹಾಜರಾಗಿ ಕಚೇರಿಯ ಅವಧಿ ಮುಗಿದ ನಂತರವೂ ಕರ್ತವ್ಯ ನಿರ್ವಹಿಸುತ್ತಿದ್ದರು.


ತಮ್ಮ ಅಧೀನ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಧೀಶರು ಅರಿತುಕೊಳ್ಳಬೇಕು. ಯಜಮಾನಿಕೆ ಮಾಡುವುದರಿಂದ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ವಿಶ್ವಾಸಾರ್ಹತೆ ಕಾಯ್ದುಕೊಂಡರೆ ನೌಕರರಿಂದ ಹೆಚ್ಚಿನ ಕೆಲಸವನ್ನು ತೆಗೆಯಬಹುದು. ಜಿಲ್ಲ ಮಟ್ಟದ ನ್ಯಾಯಾಧೀಶರು ಮತ್ತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ನೌಕರರ ಮೇಲೆ ಯಜಮಾನಿಕೆ ಪ್ರವೃತ್ತಿ ತೋರಿಸದೆ ಅವರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದರು.


ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ನ್ಯಾಯಾಧೀಶರು ವರ್ಷಕ್ಕೆ ಎರಡು ಬಾರಿ ನೌಕರರ ಪದೋನ್ನತಿಗೆ ಸಂಬಂಧಿಸಿದ ಸಭೆ ನಡೆಸಬೇಕು. ಅರ್ಹತೆಯ ಆಧಾರದಲ್ಲಿ ನೌಕರರಿಗೆ ಬಡ್ತಿ ನೀಡಬೇಕು. ಈ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸೂಚನೆ ನೀಡಬೇಕು ಎಂದರು.


ನ್ಯಾಯಾಂಗ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಇರುವ ಕೆಲಸದ ಅವಧಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಇದ್ದು ಈ ಅವಧಿಯನ್ನು ಸಂಜೆ 5.45 ಕ್ಕೆ ಕಡಿತಗೊಳಿಸಬೇಕೆಂಬ ಮಹಿಳಾ ನೌಕರರ ಬೇಡಿಕೆಯನ್ನು ಪರಿಶೀಲಿಸುವಂತೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಸೂಚಿಸಿದರು.


ಕಳೆದ ಮೂರು ವರ್ಷಗಳಲ್ಲಿ ದಂಡ, ನ್ಯಾಯಾಲಯ ಶುಲ್ಕ, ವಿವಿಧ ಹುದ್ದೆಗಳ ಪರೀಕ್ಷಾ ಶುಲ್ಕದ ರೂಪದಲ್ಲಿ 1044 ಕೋಟಿ ರೂಪಾಯಿಗಳನ್ನು ಸರಕಾರವು ಸಂಗ್ರಹಿಸಿದೆ. ಆದರೆ ನ್ಯಾಯಾಂಗ ಇಲಾಖೆಯ ಮೂಲ ಸೌಕರ್ಯ ಅಭಿವೃದ್ಧಿಗೆ ಸರಕಾರ ಎಷ್ಟು ಅನುದಾನ ಒದಗಿಸಿದೆ ಎಂದು ಪ್ರಶ್ನಿಸಿದರು. ನ್ಯಾಯಾಂಗ ಇಲಾಖೆಗೆ ಹೆಚ್ಚು ಅನುದಾನ ನೀಡಲಾಗುತ್ತದೆ ಎಂಬುವುದು ಸುಳ್ಳು. ಸಂಗ್ರಹಿಸಿದ ಅನುದಾನದಲ್ಲಿ ಕಳೆದ ಮೂರು ವರ್ಷಗಳ ಜಿಲ್ಲಾ ಅಂಕಿ ಅಂಶಗಳ ಪ್ರಕಾರ ಕಟ್ಟಡ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಅರ್ಧದಷ್ಟು ಅನುದಾನವನ್ನು ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಬಿಡಿಎ, ಗೃಹ ಮಂಡಳಿ ನಿರ್ಮಿಸಲಾದ ಮನೆಗಳಲ್ಲಿ ಶೇಕಡಾ 10 ರಿಂದ 20 ರಷ್ಟು ಮನೆಗಳನ್ನು ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಮತ್ತು ನೌಕರರಿಗೆ ಮೀಸಲಿಡಬೇಕು. ಬಡ್ತಿ ಪಡೆದ ನೌಕರರಿಗೆ ಕಾಲಕಾಲಕ್ಕೆ ತರಬೇತಿ ನೀಡಬೇಕು. ನ್ಯಾಯದಾನ ನೀಡುವ ಪ್ರಕ್ರಿಯೆಯಲ್ಲಿ ಒಬ್ಬ ನ್ಯಾಯಮೂರ್ತಿಯ ಪಾತ್ರ ಎಷ್ಟು ಮುಖ್ಯವೋ ನ್ಯಾಯಾಂಗ ಇಲಾಖೆಯ ನೌಕರರ ಪಾತ್ರವೂ ಅಷ್ಟೇ ಮುಖ್ಯ ಎಂದು ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದರು.


ನ್ಯಾಯಾಂಗ ನೌಕರರಿಗೆ ದೇಶಾದ್ಯಂತ ಏಕರೂಪದ ಕೇಂದ್ರ ಮಾದರಿ ವೇತನ ಹಾಗೂ ಇತರ ಸೇವಾ ಸೌಲಭ್ಯಗಳನ್ನು ನೀಡಬೇಕೆಂದು ಕೋರಿ ಅಖಿಲ ಭಾರತ ನ್ಯಾಯಾಂಗ ನೌಕರರ ಒಕ್ಕೂಟದ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ 2017 ನೆಯ ಇಸವಿಯಲ್ಲಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯಲ್ಲಿದ್ದು ದೇಶದ ಸಮಸ್ತ ನ್ಯಾಯಾಂಗ ನೌಕರರು ತಮಗೆ ಅನುಕೂಲಕರವಾದ ಆದೇಶವನ್ನು ಸದ್ಯದಲ್ಲೇ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.



Ads on article

Advertise in articles 1

advertising articles 2

Advertise under the article