
ಎಲೆಕ್ಷನ್ ವಿಚಾರದಲ್ಲಿ ಸೇವಾ ಜೀವನಕ್ಕೆ ಕುತ್ತು?: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಸರ್ಕಾರಿ ನೌಕರರ ಸಂಘ, ಚುನಾವಣಾಧಿಕಾರಿಗೆ ಶೋಕಾಸ್ ನೋಟಿಸ್, ಸೆಕ್ರಟರಿಗೆ ವಾರೆಂಟ್!
ಎಲೆಕ್ಷನ್ ವಿಚಾರದಲ್ಲಿ ಸೇವಾ ಜೀವನಕ್ಕೆ ಕುತ್ತು?: ಹೈಕೋರ್ಟ್ ಆದೇಶ ಉಲ್ಲಂಘಿಸಿದ ಸರ್ಕಾರಿ ನೌಕರರ ಸಂಘ, ಚುನಾವಣಾಧಿಕಾರಿಗೆ ಶೋಕಾಸ್ ನೋಟಿಸ್, ಸೆಕ್ರಟರಿಗೆ ವಾರೆಂಟ್!
ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ಮತ್ತು ಚುನಾವಣಾಧಿಕಾರಿಗೆ ಶೋಕಾಸ್ ನೋಟಿಸ್ ಹಾಗೂ ಕಾರ್ಯದರ್ಶಿಯ ವಿರುದ್ಧ ಜಾಮೀನೀಯ ವಾರಂಟ್ ಹೊರಡಿಸಿದ ಕರ್ನಾಟಕ ಹೈಕೋರ್ಟ್
ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳ ಹುದ್ದೆಗೆ ನ್ಯಾಯಾಂಗ ಇಲಾಖೆಯಿಂದ ಪ್ರತಿನಿಧಿಗಳ ಆಯ್ಕೆಗೆ ದಿನಾಂಕ 27.12.2024ರ ಒಳಗೆ ಚುನಾವಣೆ ನಡೆಸುವಂತೆ ಮಾನ್ಯ ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪಾಲಿಸದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಚುನಾವಣಾಧಿಕಾರಿ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ನ್ಯಾಯಾಂಗ ಆದೇಶದ ಉಲ್ಲಂಘನೆಗೆ ಶಿಕ್ಷೆಗೊಳಪಡುವ ಆತಂಕ ಎದುರಾಗಿದೆ.
ಮಂಗಳೂರಿನ ಮಾನ್ಯ ಪ್ರಧಾನ ನ್ಯಾಯಾಲಯವು ಹೊರಡಿಸಿದ ಅಜ್ಞಾಪಕ ನಿರ್ಬಂಧಕಾಜ್ಞೆ ಆದೇಶವನ್ನು ಪಾಲಿಸುವ ಬದಲು ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ದಾಖಲಿಸಿ ತಪ್ಪು ಮಾಹಿತಿ ನೀಡಿ ಚುನಾವಣೆ ನಡೆಸಬೇಕೆಂಬ ಆದೇಶದ ವಿರುದ್ಧ ತಡೆಯಾಜ್ಞೆ ಪಡೆದ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯ ದುರುದ್ದೇಶ ಪೂರಿತ ಕೃತ್ಯವನ್ನು ಗಂಭೀರವಾಗಿ ಪರಿಣಮಿಸಿದ ಮಾನ್ಯ ಹೈಕೋರ್ಟ್ ರಿಟ್ ಅರ್ಜಿದಾರರಿಗೆ ರೂಪಾಯಿ 5 ಲಕ್ಷ ದಂಡವನ್ನು ವಿಧಿಸಿ ದಿನಾಂಕ 27.12.2024ರ ಒಳಗೆ ಚುನಾವಣೆ ನಡೆಸುವಂತೆ ನಿರ್ದೇಶಿಸಿ ಪಾಲನಾ ವರದಿಯನ್ನು ದಿನಾಂಕ 16.1.2025 ರ ಒಳಗೆ ಸಲ್ಲಿಸುವಂತೆ ದಿನಾಂಕ 13.12.2024 ರಂದು ಆದೇಶ ಹೊರಡಿಸಿತ್ತು. ದಂಡದ ಹಣವನ್ನು ಕಾರ್ಕಳದ ಹೊಸಬೆಳಕು ವೃದ್ಧಾಶ್ರಮ ಸಂಸ್ಥೆಗೆ ನೀಡುವಂತೆ ನಿರ್ದೇಶಿಸಿತ್ತು.
ಸದರಿ ಆದೇಶದ ವಿರುದ್ಧ ದ.ಕ. ಜಿಲ್ಲಾ ಸಂಘವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯನ್ನು ಅಂಗೀಕಾರ ಹಂತದಲ್ಲಿಯೇ ಸುಪ್ರೀಂ ಕೋರ್ಟ್ ದಿನಾಂಕ 2.1.2025 ರಂದು ವಜಾಗೊಳಿಸಿತ್ತು. ದಂಡದ ಹಣ 5 ಲಕ್ಷ ರೂಪಾಯಿ ಪಾವತಿಸುವುದರಿಂದ ವಿನಾಯಿತಿ ನೀಡಬೇಕೆಂಬ ಕೋರಿಕೆಯನ್ನು ತಿರಸ್ಕರಿಸಿ ಚುನಾವಣೆಗೆ ಹೊಸ ದಿನಾಂಕವನ್ನು ಹೈಕೋರ್ಟಿನಿಂದ ಪಡೆಯುವಂತೆ ನಿರ್ದೇಶಿಸಿತ್ತು.
ಮಾನ್ಯ ಕರ್ನಾಟಕ ಹೈಕೋರ್ಟ್ ನ ಆದೇಶವನ್ನು ಪಾಲಿಸದೆ ದಿನಾಂಕ 16.1.2025 ರೊಳಗೆ ಪಾಲನಾ ವರದಿಯನ್ನು ಸಲ್ಲಿಸದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ನ್ಯಾಯಾಂಗ ಇಲಾಖೆಯ ಮತಕ್ಷೇತ್ರ ಸಂಖ್ಯೆ 47ಕ್ಕೆ ಚುನಾವಣೆ ನಡೆಸದೆ ನ್ಯಾಯಾಂಗ ನೌಕರರನ್ನು ಮತದಾನದ ಸಂವಿಧಾನಾತ್ಮಕ ಹಕ್ಕಿನಿಂದ ವಂಚಿತರನ್ನಾಗಿ ಮಾಡಿರುವ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳ ಕೃತ್ಯವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಚುನಾವಣೆ ನಡೆಸದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಕುರಿತು ಚುನಾವಣಾ ಅಧಿಕಾರಿಗೆ ಶೋಕಾಸ್ ನೊಟೀಸ್ ನೀಡಿದೆ.
ಐದು ಲಕ್ಷ ರೂಪಾಯಿ ದಂಡದ ಹಣವನ್ನು ಕಾರ್ಕಳದ ಹೊಸಬೆಳಕು ವೃದ್ದಾಶ್ರಮ ಸಂಸ್ಥೆಗೆ ನೀಡದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಜಿಲ್ಲಾ ಸಂಘದ ಕಾರ್ಯದರ್ಶಿಯಾಗಿದ್ದ ಶ್ರೀಮತಿ ಲಿಲ್ಲಿ ಪಾಯಸ್ ವಿರುದ್ಧ ರೂಪಾಯಿ 25000 ಮೊತ್ತಕ್ಕೆ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿ ದಿನಾಂಕ 12.2.2025 ರಂದು ಹೈಕೋರ್ಟ್ ಮುಂದೆ ಹಾಜರಾಗುವಂತೆ ಆದೇಶಿಸಿದೆ.
ಮಾನ್ಯ ಹೈಕೋರ್ಟ್ ದಿನಾಂಕ 13.12.2024 ರಂದು ಹೊರಡಿಸಿದ ಆದೇಶವನ್ನು ಏಕೆ ಪಾಲಿಸಲಾಗಿಲ್ಲ ಎಂಬುದರ ಕುರಿತು ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘಕ್ಕೆ ನೋಟಿಸ್ ನೀಡಿ ದಿನಾಂಕ 12.2.2025 ರಂದು ಪ್ರಕರಣವನ್ನು ಪಟ್ಟಿ ಮಾಡುವಂತೆ ಮಾನ್ಯ ಹೈಕೋರ್ಟ್ ದಿನಾಂಕ 5.2.2025 ರಂದು ಆದೇಶ ಹೊರಡಿಸಿದೆ.
ಸಾಂವಿಧಾನಿಕ ನ್ಯಾಯಾಲಯಗಳಾದ ಮಾನ್ಯ ಕರ್ನಾಟಕ ಹೈಕೋರ್ಟ್ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯವು ನೀಡಿದ ಆದೇಶವನ್ನು ಉಲ್ಲಂಘಿಸಿದ ಚುನಾವಣಾಧಿಕಾರಿ ಮತ್ತು ದ.ಕ.ಜಿಲ್ಲಾ ಸಂಘದ ಪದಾಧಿಕಾರಿಗಳು ದಂಡನೆಗೆ ಒಳಪಡುವ ಹಾಗೂ ಅವರ ಸೇವಾ ಜೀವನಕ್ಕೆ ಕುತ್ತು ಉಂಟಾಗುವ ಸಾಧ್ಯತೆ ನಿಚ್ಚಳವಾಗಿದೆ.