ಸಹೋದ್ಯೋಗಿ ವಿರುದ್ಧ ದುರುದ್ದೇಶಪೂರಿತ ಪ್ರಕರಣ: ಕ್ಷಮೆಯಾಚಿಸಿ, 1.2 ಲಕ್ಷ ರೂ. ಪರಿಹಾರ ನೀಡಲು ಮಹೇಶ್ ಜೋಶಿಗೆ ಕೋರ್ಟ್ ಆದೇಶ
ಸಹೋದ್ಯೋಗಿ ವಿರುದ್ಧ ದುರುದ್ದೇಶಪೂರಿತ ಪ್ರಕರಣ: ಕ್ಷಮೆಯಾಚಿಸಿ, 1.2 ಲಕ್ಷ ರೂ. ಪರಿಹಾರ ನೀಡಲು ಮಹೇಶ್ ಜೋಶಿಗೆ ಕೋರ್ಟ್ ಆದೇಶ
ದೂರದರ್ಶನಕ್ಕೆ ಸೇರ್ಪಡೆಯಾದ ದಿನದಿಂದ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ದೂರದರ್ಶನದ ಮಾಜಿ ಉದ್ಯೋಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಸಿಟಿ ಸಿವಿಲ್ ಕೋರ್ಟ್ ತೀರ್ಪು ನೀಡಿದೆ.
ಮಹೇಶ್ ಜೋಶಿಯ ನಡೆ ಸರ್ವಥಾ ಒಪ್ಪುವಂತಿಲ್ಲ ಎಂದು ಕಟುಶಬ್ದಗಳಲ್ಲಿ ತೀರ್ಪು ನೀಡಿರುವ ಸಿಟಿ ಸಿವಿಲ್ ಕೋರ್ಟ್, ಪ್ರಕರಣದ ಫಿರ್ಯಾದಿ ಎನ್.ಕೆ. ಮೋಹನ್ ರಾಮ್ ಅವರಿಗೆ 1.2 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ನೀಡಬೇಕು ಹಾಗೂ ಫಿರ್ಯಾದಿದಾರರಲ್ಲಿ ಮಹೇಶ್ ಜೋಶಿ ಬೇಷರತ್ ಕ್ಷಮೆಯಾಚನೆ ಮಾಡಬೇಕು ಎಂದು ಆದೇಶ ನೀಡಿದೆ.
ದೂರದರ್ಶನ ಹಾಗೂ ಎಲ್ಲ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಮೂಲಕ ಎನ್.ಕೆ. ಮೋಹನ್ ರಾಮ್ ಅವರಲ್ಲಿ ಕ್ಷಮೆ ಕೋರಬೇಕು ಎಂದು ಹೇಳಿರುವ ಕೋರ್ಟ್, ಫಿರ್ಯಾದಿದಾರರ ವಿರುದ್ಧ ನಕಲಿ ಪ್ರಕರಣ ದಾಖಲಿಸಿ ಮಹೇಶ್ ಜೋಷಿ ಅಪಾರ ವೇದನೆ ಮತ್ತು ನೋವನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದೆ.
ಜೋಶಿ ಅವರು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡಿದ್ಧಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ವಿಚಕ್ಷಣಾ ವಿಭಾಗಕ್ಕೆ ಜೋಶಿ ಬರೆದಿರುವ ಪ್ರತಿಯೊಂದು ಶಬ್ಧವೂ ಎನ್.ಕೆ. ಮೋಹನ್ ರಾಮ್ ವಿರುದ್ಧ ಪ್ರತೀಕಾರಕ್ಕೆ ಸಾಕ್ಷಿಯಾಗಿದೆ ಎಂದು ಕೋರ್ಟ್ ಹೇಳಿದೆ.
ಪರಿಹಾರ ಪಾವತಿಸಲು ಜೋಶಿಗೆ ಆದೇಶ ನೀಡಿದರಷ್ಟೇ ಸಾಲದು, ಈ ಮೂಕ ಸರ್ಕಾರಿ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸುವವರಿಗೆ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಬೇಕಾಗಿದೆ ಎಂದು ನ್ಯಾ. ನಳಿನಿ ಕುಮಾರ್ ಅವರಿದ್ದ ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.