
ಚೆಕ್ ಅಮಾನ್ಯ ಪ್ರಕರಣ: 'ದಿವಾಳಿ' ಷರಾದೊಂದಿಗೆ ಚೆಕ್ ಬೌನ್ಸ್ - ಸೆಕ್ಷನ್ 138ರಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: 'ದಿವಾಳಿ' ಷರಾದೊಂದಿಗೆ ಚೆಕ್ ಬೌನ್ಸ್ - ಸೆಕ್ಷನ್ 138ರಡಿ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಬ್ಯಾಂಕ್ 'ದಿವಾಳಿ' ಪ್ರಕ್ರಿಯೆಯಲ್ಲಿ ಇದೆ ಎಂಬ ಷರಾದೊಂದಿಗೆ ಚೆಕ್ ಬೌನ್ಸ್ ಆಗಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣ ಎನ್‌ಐ ಕಾಯ್ದೆಯ ಸೆಕ್ಷನ್ 138ರಡಿ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಪ್ರಕರಣವನ್ನು ರದ್ದುಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಬ್ಯಾಂಕ್ ದಿವಾಳಿ ಪ್ರಕ್ರಿಯೆ ಅಡಿಯಲ್ಲಿದೆ ಎಂಬ ಕಾರಣಕ್ಕೆ ಚೆಕ್ ಅಮಾನ್ಯಗೊಂಡಿದೆ. ಈ ಕಾರಣದ ಪ್ರಕಾರ, ಚೆಕ್ ನೀಡಿದಾತನ ಖಾತೆಯಲ್ಲಿ ಹಣದ ಕೊರತೆಯಿಂದ ಚೆಕ್ ಅಮಾನ್ಯಗೊಂಡಿದೆ ಎಂದು ಪರಿಗಣಿಸಲಾಗದು. ಆದ್ದರಿಂದ ಸದ್ರಿ ಅಮಾನ್ಯವನ್ನು ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138ರಡಿ ಅಪರಾಧ ಎಂದು ಪರಿಗಣಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ವಿವರ:
ಆರೋಪಿತರು ದಿವಾಳಿಯ ಪ್ರಕ್ರಿಯೆಗೊಳಪಟ್ಟ ಕರ್ನಾಟಕ ಗುತ್ತಿಗೆದಾರರ ಸಹಕಾರ ಬ್ಯಾಂಕ್‌ನ ಬೆಂಗಳೂರು ಶಾಖೆಯ ಚೆಕ್‌ನ್ನು ಮಂಡ್ಯದ ಶ್ರೀರಂಗಪಟ್ಟಣ ನಿವಾಸಿ ಗೃಹಿಣಿಯಾಗಿರುವ ದೂರುದಾರರಿಗೆ ನೀಡಿದ್ದರು. ಈ ಚೆಕ್ "ಬ್ಯಾಂಕ್ ದಿವಾಳಿ ಪ್ರಕ್ರಿಯೆಯಲ್ಲಿದೆ" ಎಂಬ ಷರಾದೊಂದಿಗೆ ಅಮಾನ್ಯಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಲೀಗಲ್ ನೋಟೀಸ್ ಜಾರಿಗೊಳಿಸಿದ್ದ ದೂರುದಾರರು ಪ್ರಕರಣವನ್ನು ಶ್ರೀರಂಗಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ವಿಚಾರಣೆ ನಡೆದು ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.
ಈ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ ಆರೋಪಿ ಪರವಾಗಿ ಶ್ರೀರಂಗಪಟ್ಟಣದ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದ್ದು, ಆರೋಪಿಯನ್ನು ದೋಷಮುಕ್ತಗೊಳಿಸಿತ್ತು.
ಇದರಿಂದ ಬಾಧಿತರಾದ ಸಾವಿತ್ರಮ್ಮ ಈ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್ ಮೊರೆ ಹೋದರು.
ಇದರಿಂದ ಬಾಧಿತರಾದ ಸಾವಿತ್ರಮ್ಮ ಈ ತೀರ್ಪಿನ ವಿರುದ್ಧ ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಅಮಾನ್ಯಗೊಂಡ ಷರಾ ವನ್ನು ಪರಿಗಣಿಸಿ ಈ ಪ್ರಕರಣ ಸೆಕ್ಷನ್ 138ರಡಿ ಅಪರಾಧವಲ್ಲ ಎಂದು ಪರಿಗಣಿಸಿ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣ: ಸಾವಿತ್ರಮ್ಮ Vs ಎಂ.ಎಸ್. ರಾಮಚಂದ್ರ
ಕರ್ನಾಟಕ ಹೈಕೋರ್ಟ್, Crl.A. 381/2013 Dated 11-02-2025