
'ಸುಂದರವಾಗಿದ್ದೀಯ' ಎಂಬ ಸಂದೇಶವೂ ಅಶ್ಲೀಲತೆಗೆ ಸಮ!: ಅಪರಿಚಿತ ಮಹಿಳೆಗೆ ರಾತ್ರಿ ಸಂದೇಶ ಕಳುಹಿಸಿದಾತನಿಗೆ 3 ತಿಂಗಳ ಜೈಲು ಶಿಕ್ಷೆ- ಕೋರ್ಟ್ ತೀರ್ಪು
'ಸುಂದರವಾಗಿದ್ದೀಯ' ಎಂಬ ಸಂದೇಶವೂ ಅಶ್ಲೀಲತೆಗೆ ಸಮ!: ಅಪರಿಚಿತ ಮಹಿಳೆಗೆ ರಾತ್ರಿ ಸಂದೇಶ ಕಳುಹಿಸಿದಾತನಿಗೆ 3 ತಿಂಗಳ ಜೈಲು ಶಿಕ್ಷೆ- ಕೋರ್ಟ್ ತೀರ್ಪು
ಅಪರಿಚಿತ ಮಹಿಳೆಗೆ, ನೀನು ಸುಂದರವಾಗಿ ಇದ್ದೀಯ.. ತೆಳ್ಳಗೆ ಇದ್ದೀಯ ಎಂದು ರಾತ್ರಿ ವೇಳೆ ಸಂದೇಶ ಕಳುಹಿಸಿರುವುದು ಅಶ್ಲೀಲತೆಗೆ ಸಮ ಎಂದು ಮುಂಬೈನ ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ.
ಪಾಲಿಕೆಯ ಮಾಜಿ ಸದಸ್ಯರೊಬ್ಬರು ಸಲ್ಲಿಸಿದ್ದ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಿ.ಜಿ. ಧೋಬ್ಲೆ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪಾಲಿಕೆಯ ಮಾಜಿ ಸದಸ್ಯರೊಬ್ಬರಿಗೆ ಆರೋಪಿ ವಾಟ್ಸ್‌ಆಪ್ ಸಂದೇಶವನ್ನು ಕಳುಹಿಸಿದ್ದು, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ವ್ಯಕ್ತಿಗೆ ನೀಡಿದ್ದ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಸಮಕಾಲೀನ ಸಮಾಜ ಒಪ್ಪಿಕೊಂಡಿರುವ ಮೌಲ್ಯಗಳನ್ನು ಆಧರಿಸಿ ಒಬ್ಬ ಸಾಮಾನ್ಯ ವ್ಯಕ್ತಿ ಹೊಂದಿರುವ ದೃಷ್ಟಿಕೋನವನ್ನು ಅನ್ವಯಿಸಿ ಅಶ್ಲೀಲತೆಯ ಕುರಿತು ನಿರ್ಧರಿಸಬೇಕು ಎಂದು ನ್ಯಾಯಪೀಠ ಹೇಳಿದೆ.
ದೂರುದಾರರಾದ ಪಾಲಿಕೆಯ ಸದಸ್ಯರಿಗೆ ಆರೋಪಿ ರಾತ್ರಿ 11 ರಿಂದ 12-30 ಮಧ್ಯೆ ವಾಟ್ಸ್‌ಆಪ್‌ನಲ್ಲಿ ಈ ಸಂದೇಶಗಳನ್ನು ಕಳುಹಿಸುತ್ತಿದ್ದರು. ನೀನು ತೆಳ್ಳಗೆ ಇದ್ದೀಯ.. ಸುಂದರವಾಗಿದ್ದೀಯ.. ನೀನು ಸುಂದರವಾಗಿ ಕಾಣಿಸುತ್ತೀಯ. ನನಗೆ ಕೇವಲ 40 ವರ್ಷ ವಯಸ್ಸು... ನಿನಗೆ ಮದುವೆ ಆಗಿದ್ದೀಯ, ನಾನು ನಿನ್ನನ್ನು ಇಷ್ಟಪಡುತ್ತೇನೆ ಎಂಬಂತಹ ಸಂದೇಶಗಳನ್ನು ಅಪರಿಚಿತ ವ್ಯಕ್ತಿ ಮಹಿಳೆಗೆ ಕಳುಹಿಸುತ್ತಿದ್ದ.
ವಾಟ್ಸ್‌ಆಪ್ ಮೂಲಕ ಅಶ್ಲೀಲ ಚಿತ್ರಗಳು ಮತ್ತು ಅಶ್ಲೀಲ ಫೋಟೋಗಳನ್ನು ಕಳುಹಿಸುವುದನ್ನು ಯಾವುದೇ ವಿವಾಹಿತ ಮಹಿಳೆ ಅಥವಾ ಆಕೆಯ ಪತಿ ಸಹಿಸುವುದಿಲ್ಲ. ಸಂದೇಶ ಕಳುಹಿಸಿದವರು ಮತ್ತು ದೂರುದಾರರು ಪರಸ್ಪರ ಪರಿಚಿತರಲ್ಲದಿದ್ದಾಗ ಇಂತಹ ಕೃತ್ಯಗಳನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದಲ್ಲಿತಮ್ಮಿಬ್ಬರ ನಡುವೆ ಮೊದಲು ಪರಿಚಯವಿತ್ತು ಎಂಬ ಬಗ್ಗೆ ಆರೋಪಿತರು ಯಾವುದೇ ದಾಖಲೆ ಸಲ್ಲಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ಈ ರೀತಿಯ ಅಶ್ಲೀಲ ಸಂದೇಶಗಳು ಮಹಿಳೆಯ ಘನತೆಗೆ ಧಕ್ಕೆ ತರುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ವಿಚಾರಣಾ ನ್ಯಾಯಾಲಯವು ಆರೋಪಿಗೆ 2022ರಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ರಾಜಕೀಯ ಕಾರಣಕ್ಕೆ ತನ್ನ ವಿರುದ್ಧ ದೂರು ಹೊರಿಸಲಾಗಿದೆ ಎಂಬ ಆರೋಪಿಯ ವಾದವನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದ್ದು, ಈ ವಾದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.