
ವಾಟ್ಸ್‌ಆಪ್ ಮೂಲಕ ಆರೋಪಿಗೆ ನೋಟೀಸ್ ಕಳಿಸಲು ಅವಕಾಶ ಇಲ್ಲ: ಪೊಲೀಸರಿಗೆ ಕಾನೂನು ಪಾಠ ಹೇಳಿದ ಕರ್ನಾಟಕ ಹೈಕೋರ್ಟ್
ವಾಟ್ಸ್‌ಆಪ್ ಮೂಲಕ ಆರೋಪಿಗೆ ನೋಟೀಸ್ ಕಳಿಸಲು ಅವಕಾಶ ಇಲ್ಲ: ಪೊಲೀಸರಿಗೆ ಕಾನೂನು ಪಾಠ ಹೇಳಿದ ಕರ್ನಾಟಕ ಹೈಕೋರ್ಟ್
ವಾಟ್ಸ್‌ಆಪ್ ಮೂಲಕ ಆರೋಪಿಗೆ ನೋಟೀಸ್ ಕಳಿಸಲು ಅವಕಾಶ ಇಲ್ಲ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ಪೊಲೀಸರು ಆರೋಪಿಗೆ ವಾಟ್ಸ್‌ಆಪ್ ಮೂಲಕ ನೋಟೀಸ್ ಕಳುಹಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪೊಲೀಸರಿಗೆ ಕಾನೂನು ಪಾಠ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರಿಗೆ ತಿಳಿ ಹೇಳಿದ್ದು, ವಿದ್ಯಾರ್ಥಿಯೊಬ್ಬನಿಗೆ ವಾಟ್ಸ್ಆಪ್ ಮೂಲಕ ಜಾರಿ ಮಾಡಿದ್ದ ನೋಟೀಸನ್ನು ರದ್ದು ಮಾಡಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅಡಿಯಲ್ಲಿ ನೋಟೀಸ್ ಜಾರಿಗೊಳಿಸಲು ಪ್ರಕ್ರಿಯೆ ಬಗ್ಗೆ ವಿವರವಾಗಿ ಹೇಳಿದೆ. ಅದಕ್ಕೆ ಹೊರತಾಗಿ ವಾಟ್ಸ್ಯಾಪ್ ಮೂಲಕ ತನಿಖೆಗೆ ಹಾಜರಾಗಲು ನೋಟೀಸ್ ಜಾರಿ ಮಾಡುವುದು ಪರ್ಯಾಯ ವಿಧಾನವಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ತೀರ್ಪು ನೀಡಿದೆ ಎಂಬುದನ್ನು ನ್ಯಾಯಪೀಠ ನೆನಪಿಸಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ 35 ಹಾಗೂ ಸಿಆರ್‌ಪಿಸಿಯ ಸೆಕ್ಷನ್ 41 ಅಡಿಯಲ್ಲಿ ವ್ಯಕ್ತಿಯು ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವರ ಬಂಧನ ಅಗತ್ಯವಿಲ್ಲದಿದ್ದರೆ ಅವರನ್ನು ವಿಚಾರಣೆಗೆ ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ನೋಟೀಸ್ ಜಾರಿ ಮಾಡಬಹುದಾಗಿದೆ. ಆದರೆ, ಈ ನೋಟೀಸನ್ನು ವಾಟ್ಸ್‌ಆಪ್ ಮೂಲಕ ಕಳುಹಿಸಲು ಅವಕಾಶ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಉಲ್ಲೇಖಿಸಿದ ಹೈಕೋರ್ಟ್ ನ್ಯಾಯಪೀಠ, ಬೆಂಗಳೂರಿನ ಆಡುಗೋಡಿ ಪೊಲೀಸರು ಬೆಂಗಳೂರಿನ ವಿದ್ಯಾರ್ಥಿ ಪವನ್ ಕುಮಾರ್ ಅವರಿಗೆ ನೀಡಿದ್ದ ನೋಟೀಸನ್ನು ರದ್ದುಪಡಿಸಿದೆ.