
ಒಂದೇ ಘಟನೆಗೆ ಎರಡು ಎಫ್‌ಐಆರ್ ದಾಖಲಿಸಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಒಂದೇ ಘಟನೆಗೆ ಎರಡು ಎಫ್‌ಐಆರ್ ದಾಖಲಿಸಲಾಗದು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಒಂದೇ ಘಟನೆಗೆ ಸಂಬಂಧಪಟ್ಟಂತೆ ಹಲವು ಎಫ್ಐಆರ್ಗಳನ್ನು ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
'ಬಿ.ವಿ. ಬೈರೇಗೌಡ Vs ನಿಸಾರ್ ಅಹ್ಮದ್' ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಗಮನಕ್ಕಾಗಿ ಬ್ಯಾನರ್ ಕಟ್ಟಿದ್ದ ವಿಚಾರವಾಗಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎರಡನೇ ಎಫ್‌ಐಆರ್‌ನ್ನು ನ್ಯಾಯಪೀಠ ರದ್ದುಪಡಿಸಿದೆ.
ಒಂದು ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್ ದಾಖಲಿಸಿದ್ದ ಬೆಂಗಳೂರು ಗ್ರಾಮಾಂತರ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಿವಾಸಿ ಬಿ.ವಿ. ಬೈರೇಗೌಡ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಒಮ್ಮೆ, ಒಂದು ಘಟನೆಗೆ ಸಂಬಂಧಪಟ್ಟಂತೆ ಒಂದು ದೂರನ್ನು ದಾಖಲಿಸಿಕೊಂಡರೆ ಅದೇ ಘಟನೆಯ ಬಗ್ಗೆ ಮತ್ತೊಂದು ದೂರನ್ನು ದಾಖಲಿಸಲಾಗದು ಮತ್ತು ಈ ದೂರನ್ನು ಮಾರ್ಪಡಿಸಲು ಅವಕಾಶ ನೀಡಲಾಗದು. ಜೊತೆಗೆ ಅದೇ ಘಟನೆ ಬಗ್ಗೆ ಎರಡನೇ ಅಥವಾ ಹಲವು ಎಫ್ಐಆರ್ಗಳನ್ನು ದಾಖಲಿಸಲು ಕೂಡ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ನ್ಯಾಯಪೀಠ ಹೇಳಿದೆ.
ಒಂದೊಮ್ಮೆ ದಾಖಲಿಸಿದರೂ ಅದು ಕಾನೂನಿನ ನಿಯಮಗಳಿಗೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಅಲ್ಲದೆ, ಸಮಾನತೆಯ ಸಿದ್ಧಾಂತಕ್ಕೂ ವ್ಯತಿರಿಕ್ತವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದ್ದು ಎರಡನೇ ರದ್ದುಪಡಿಸಿ ಆದೇಶ ಹೊರಡಿಸಿದೆ.
ಘಟನೆಯ ವಿವರ:
ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಒಬ್ಬರ ಪರವಾಗಿ ಪ್ರಚಾರಕ್ಕೆ ಪಕ್ಷದ ಮುಖಂಡರು ರಾಜ್ಯಕ್ಕೆ ಆಗಮಿಸಿದ್ದರು. ಅವರಿಗೆ ಸ್ವಾಗತ ಕೋರಿ ಪಕ್ಷದ ಕಾರ್ಯಕರ್ತರು ಅನಧಿಕೃತವಾಗಿ ಬ್ಯಾನರ್ ಬಂಟಿ ಕಟ್ಟಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಕ್ರಮ ಜರುಗಿಸಿದ ಹೊಸಕೋಟೆಯ ನಗರಸಭೆ ಅಧಿಕಾರಿಗಳು ಅನಧಿಕೃತ ಬ್ಯಾನರ್ ತೆರವಿಗೆ ಆದೇಶ ನೀಡಿದರು. ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು ದೂರು ನೀಡಿದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಮತ್ತು ಹಲ್ಲೆ ನಡೆಸಿದರು ಎಂಬ ಆರೋಪದಡಿ ಪೊಲೀಸರಿಗೆ ದೂರು ದಾಖಲಿಸಲಾಗಿತ್ತು.
ಈ ಘಟನೆಗೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ದೂರುಗಳನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿದ ಅರ್ಜಿದಾರರು ಒಂದು ಘಟನೆ ಬಗ್ಗೆ ಎರಡು ದಾಖಲಿಸಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು
ಪ್ರಕರಣ: ಬಿ.ವಿ. ಬೈರೇಗೌಡ Vs ನಿಸಾರ್ ಅಹ್ಮದ್
ಕರ್ನಾಟಕ ಹೈಕೋರ್ಟ್, CrlP No. 3171/2018 Dated 20-09-2021