
ಠಾಣೆಯಲ್ಲಿ ಅಕ್ರಮ ಬಂಧನ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ 2 ಲಕ್ಷ ರೂ. ದಂಡ, ಇಲಾಖಾ ವಿಚಾರಣೆಗೆ ಆದೇಶ
ಠಾಣೆಯಲ್ಲಿ ಅಕ್ರಮ ಬಂಧನ: ಪೊಲೀಸ್ ಇನ್ಸ್‌ಪೆಕ್ಟರ್‌ಗೆ 2 ಲಕ್ಷ ರೂ. ದಂಡ, ಇಲಾಖಾ ವಿಚಾರಣೆಗೆ ಆದೇಶ
ದೂರುದಾರರ ಸಂಬಂಧಿಯನ್ನು ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಇರಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಇನ್ಸ್ಪೆಕ್ಟರ್ ಎ.ಡಿ. ನಾಗರಾಜ್ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೆ ಆರೋಪಿ ಇನ್ಸ್ಪೆಕ್ಟರ್ ಏಡಿ ನಾಗರಾಜ ಅವರಿಂದ ಎರಡು ಲಕ್ಷ ರೂಪಾಯಿ ದಂಡ ವಸೂಲಿ ಮಾಡುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ ಶಿಫಾರಸು ಮಾಡಿದೆ.
ಸಿಐಡಿಯಲ್ಲಿ ಸಿಸಿಎನ್ ಅಂಡ್ ಐ ವಿಭಾಗದಲ್ಲಿ ನಾಗರಾಜ ಅವರು ಕೆಲಸ ಮಾಡುತ್ತಿದ್ದ ವೇಳೆ ದೂರುದಾರರ ಸಂಬಂಧಿ ಚಂದ್ರಶೇಖರ್ ಅವರನ್ನು ಅಕ್ರಮ ಬಂಧನದಲ್ಲಿ ಇಡಲಾಗಿತ್ತು. ಚಂದ್ರಶೇಖರ್ ಅವರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಆಯೋಗ ಮಾಹಿತಿ ನೀಡಿದೆ.
ಇನ್ಸ್ಪೆಕ್ಟರ್ ಎ.ಡಿ. ನಾಗರಾಜ್ ಅವರು ತಮ್ಮ ಕಾರ್ಯ ವ್ಯಾಪ್ತಿಯನ್ನು ಮೀರಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ವಿಚಾರಣೆಯ ವೇಳೆ ಗೊತ್ತಾಗಿದೆ.
ಬಾಧಿತ ವ್ಯಕ್ತಿ ಹಾಗೂ ಅವರ ಬಳಿ ಇದ್ದ ಡಿಜಿಟ್ ಟ್ರ್ಯಾಕ್ ಮಿಷನ್ ಅನ್ನು ಬಲವಂತದಿಂದ ಜೀಪಿನಲ್ಲಿ ತೆಗೆದುಕೊಂಡು ಹೋಗಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದು ಆಯೋಗದ ವಿಚಾರಣೆಯಲ್ಲಿ ಸಾಬೀತಾಗಿದೆ ಎಂದು ಮಾನವ ಹಕ್ಕುಗಳ ಆಯೋಗದ ವರದಿ ಹೇಳಿದೆ.
ಚಂದ್ರಶೇಖರ ಹಾಗೂ ದೂರುದಾರ ರಾಜು ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಮೊತ್ತವನ್ನು ಪರಿಹಾರವಾಗಿ ರಾಜ್ಯ ಸರಕಾರ ನೀಡಬೇಕು ಎಂದು ಆಯೋಗ ಹೇಳಿದೆ.
ಇಲಾಖೆ ವಿಚಾರಣೆ ನಡೆದ ಬಳಿಕ ಪರಿಹಾರವಾಗಿ ನೀಡಲಾದ ಎರಡು ಲಕ್ಷ ರೂಪಾಯಿ ಮೊತ್ತವನ್ನು ಇನ್ಸ್ಪೆಕ್ಟರ್ ವೈಯಕ್ತಿಕವಾಗಿ ನೀಡಬೇಕು. ಹಾಗಾಗಿ, ಅವರ ವೇತನದಿಂದ ವಸೂಲಿ ಮಾಡಿಕೊಳ್ಳಬೇಕು ಎಂದು ಆಯೋಗವು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದೆ.
ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮ 1993 ಕಲಂ 18 (ಇ) ಪ್ರಕಾರ ಶಿಫಾರಸು ಪ್ರತಿ ತಲುಪಿದ ಒಂದು ತಿಂಗಳ ಒಳಗಾಗಿ ಮುಖ್ಯ ಕಾರ್ಯದರ್ಶಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಆಯೋಗದ ಸದಸ್ಯರಾದ ಎಸ್ ಕೆ ನಂಟಿಗೋಡಿ ಹೇಳಿದ್ದಾರೆ.