-->
ಕೈ ಕೊಟ್ಟ ಕಾವೇರಿ ತಂತ್ರಾಂಶ: ಆಸ್ತಿ ನೋಂದಣಿಗೆ ಜನರ ಪರದಾಟ

ಕೈ ಕೊಟ್ಟ ಕಾವೇರಿ ತಂತ್ರಾಂಶ: ಆಸ್ತಿ ನೋಂದಣಿಗೆ ಜನರ ಪರದಾಟ

ಕೈ ಕೊಟ್ಟ ಕಾವೇರಿ ತಂತ್ರಾಂಶ: ಆಸ್ತಿ ನೋಂದಣಿಗೆ ಜನರ ಪರದಾಟ




ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕಾವೇರಿ 2 ತಂತ್ರಾಂಶದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಆಸ್ತಿ ನೋಂದಣಿಗೆ ಮುಂದಾಗಿರುವ ಜನರು ಪರದಾಡುವಂತೆ ಆಗಿದೆ.


ಗ್ರಾಮೀಣ ಮತ್ತು ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಸರಕಾರ ಇ-ಸ್ವತ್ತು ಮತ್ತು ಇ-ಖಾತ ಕಡ್ಡಾಯಗೊಳಿಸಿದ ನಂತರ ಹಲವು ಸಮಸ್ಯೆಗಳು ಎದುರಾಗಿದೆ. ಆಸ್ತಿಗಳ ನೋಂದಣಿ ಸಹಿತ ನೋಂದಣಿ ಪ್ರಕ್ರಿಯೆಗೆ ಇದು ತೊಡಕಾಗಿದೆ.


ಈಗ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ರಾಜ್ಯದ ಎಲ್ಲಾ 252 ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲೂ ನೋಂದಣಿ ಪ್ರಕ್ರಿಯೆಗೆ ವ್ಯಾಪಕ ಅಡ್ಡಿ ಉಂಟಾಗಿದೆ. ಪ್ರತಿದಿನ ಸರಾಸರಿ ಸುಮಾರು 8000 ಆಸ್ತಿಗಳ ನೋಂದಣಿ, ವರ್ಗಾವಣೆ, ಋಣ ಸೃಷ್ಟಿ ಮತ್ತು ಋಣ ಕಳೆಯುವಿಕೆ ನಡೆಯುತ್ತಿತ್ತು. ಆದರೆ, ಈ ಸಂಖ್ಯೆ ಕಳೆದ ಎರಡು ದಿನಗಳಲ್ಲಿ ಶೇಕಡ 50ರಷ್ಟು ಕುಸಿದಿದೆ.


ಜನರು ಸೊತ್ತುಗಳ ನೋಂದಣಿಗಾಗಿ ಕಚೇರಿಗಳಿಗೆ ಅಲೆದಾಡುವುದು, ತಮ್ಮ ನೋಂದಣಿ ಆಗದೆ ದಿನವಿಡೀ ಕಾಯುವುದು ನಡೆದಿದೆ.


ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ವಿಳಂಬವಾಗುವುದನ್ನು ತಪ್ಪಿಸಲು, ಪ್ರಕ್ರಿಯೆಯನ್ನು ಸುಲಲಿತಗೊಳಿಸಲು ಕಾವೇರಿ ತಂತ್ರಾಂಶದ ಬದಲು ಕಾವೇರಿ-2 ಅನುಷ್ಠಾನಗೊಳಿಸಲಾಗಿತ್ತು. ಜನರೇ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಉಪ ಉಪನೋಂದಣಾಧಿಕಾರಿಗಳು ಆನ್‌ ಲೈನ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಾರೆ.


ಅನುಮೋದನೆ ದೊರೆತ ನಂತರ ನೋಂದಣಿ ದಿನ ಸಮಯ ಸಿಗುತ್ತದೆ. ಈ ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.


ಆದರೆ ಫೆಬ್ರವರಿ 1ರಿಂದ ತಾಂತ್ರಿಕ ಸಮಸ್ಯೆಗಳು ಆರಂಭವಾದ ಕಾರಣ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಲು ಆಗುತ್ತಿರಲಿಲ್ಲ. ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ತಾಂತ್ರಿಕ ಸಮಸ್ಯೆ ಇರಲಿಲ್ಲ. ಬಹುತೇಕ ಗ್ರಾಹಕರು ಮತ್ತು ವಕೀಲರು ದಾಖಲೆಗಳ ಅಪ್‌ಲೋಡ್ ಮಾಢಲು ಪರದಾಡುವಂತೆ ಆಗಿದೆ. ತಂತ್ರಾಂಶ ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದ ಕಾರಣ ಫೆಬ್ರವರಿ 3 ಮತ್ತು 4ರಂದು ದೊಡ್ಡ ಮಟ್ಟದ ನೋಂದಣಿ ಪ್ರಕ್ರಿಯೆ ತೊಡಕುಂಟಾಯಿತು


ಹಿಂದಿನ ದಿನಗಳಲ್ಲೇ ನೋಂದಣಿ ಶುಲ್ಕ ಪಾವತಿ ಮಾಡಿ ನೋಂದಣಿಗೆ ದಿನ ನಿಗದಿಪಡಿಸಿಕೊಂಡವರು ಇಡೀ ದಿನ ಕಚೇರಿಯಲ್ಲಿ ಕಾದು ವಾಪಸ್ ಸಾಗುತ್ತಿದ್ದಾರೆ.

ಕಳೆದ ಎರಡು ದಿನಗಳಿಂದ ಕಾವೇರಿ 2 ಸ್ವತಂತ್ರ ತಂತ್ರಾಂಶದ ಲಿಂಕ್ ಸರಿಯಾಗಿ ಸಿಗುತ್ತಿಲ್ಲ. ಮೊದಲೇ ಎಲ್ಲಾ ಪ್ರಕ್ರಿಯೆ ಮುಗಿಸಿ ದಿನಾಂಕ ನಿಗದಿ ಮಾಡಿಕೊಂಡವರಿಗೆ ಹಾಕಿರುವ ರಜೆ ವ್ಯರ್ಥವಾಗಿದೆ, ಋಣಭಾರ ಪತ್ರ, ದೃಢೀಕರಣ ಪತ್ರವು ಸಿಗುತ್ತಿಲ್ಲ.


ಬ್ಯಾಂಕ್ ವ್ಯವಹಾರಗಳಿಗೆ ದಾಖಲೆ ಸಲ್ಲಿಸಲು ಪರದಾಡಬೇಕಾಗಿದೆ ಎಂದು ಗ್ರಾಹಕರ ಅಳಲು. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯಲಿದೆ. ತಂತ್ರಾಂಶವನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನೋಂದಣಿ ಇಲಾಖೆಯ ಮಹಾಪರಿವೀಕ್ಷಕರಾದ ಶ್ರೀ ಕೆ.ಎ. ದಯಾನಂದ ಅವರು ಹೇಳಿದ್ದಾರೆ.


Ads on article

Advertise in articles 1

advertising articles 2

Advertise under the article