
ಆರೋಪಿಗೆ ಅರ್ಹ ದಾಖಲೆ ಪಡೆಯಲು ಆರ್‌ಟಿಐ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಬಾರದು: ಕರ್ನಾಟಕ ಹೈಕೋರ್ಟ್
ಆರೋಪಿಗೆ ಅರ್ಹ ದಾಖಲೆ ಪಡೆಯಲು ಆರ್‌ಟಿಐ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಬಾರದು: ಕರ್ನಾಟಕ ಹೈಕೋರ್ಟ್
ಪ್ರರಕಣಕ್ಕೆ ಸಂಬಂಧಿಸಿದಂತೆ ಆರೋಪಿಯು ತನಗೆ ಅರ್ಹವಾದ ದಾಖಲೆಗಳನ್ನು ಪಡೆಯಲು ಆರ್‌ಟಿಐ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಒತ್ತಾಯಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
"ಡಾ. ಶಿವಮೂರ್ತಿ ಮುರುಘಾ ಶರಣರು vs. ಕರ್ನಾಟಕ ರಾಜ್ಯ" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ತಮ್ಮ ವಿರುದ್ಧದ ಪೋಕ್ಸೊ ವಿಚಾರಣೆಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಕೋರಿ ಡಾ. ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.
ಅಪರಾಧದ ಆರೋಪಿಯಾಗಿರುವ ವ್ಯಕ್ತಿಯೊಬ್ಬರು ಕ್ರಿಮಿನಲ್ ವಿಚಾರಣೆಯ ಸಮಯದಲ್ಲಿ ತನ್ನ ಪ್ರತಿವಾದವನ್ನು ಬೆಂಬಲಿಸಲು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 91 ರ ಅಡಿಯಲ್ಲಿ ತನಗೆ ಅರ್ಹವಾದ ದಾಖಲೆಗಳನ್ನು ಪಡೆಯಲು ಮಾಹಿತಿ ಹಕ್ಕು ಕಾಯ್ದೆ (RTI ಕಾಯ್ದೆ) ಅಡಿಯಲ್ಲಿ ಅರ್ಜಿ ಸಲ್ಲಿಸಲು ಒತ್ತಾಯಿಸಬಾರದು ಎಂದು ನ್ಯಾಯಪೀಠ ಹೇಳಿದೆ.
ಕ್ರಿಮಿನಲ್ ವಿಚಾರಣೆಯಲ್ಲಿ ಆರೋಪಿಯು ತಮ್ಮ ಪ್ರತಿವಾದ ಮಂಡಿಸಲು ಎಲ್ಲ ಹಕ್ಕು ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ದಾಖಲೆಗಳನ್ನು ಪಡೆಯಲು ಅಪರಾಧ ಪ್ರಕ್ರಿಯಾ ಸಂಹಿತೆಯ (CrPC) ಸೆಕ್ಷನ್ 91 ರ ಅಡಿಯಲ್ಲಿ ಅವಕಾಶ ಇದೆ. ಆದರೂ, ಆರೋಪಿಯನ್ನು ಮಾಹಿತಿ ಹಕ್ಕು ಕಾಯ್ದೆ (RTI ಕಾಯ್ದೆ) ಅಡಿಯಲ್ಲಿ ಅರ್ಜಿ ಸಲ್ಲಿಸಲು ಒತ್ತಾಯಿಸಬಾರದು ಎಂದು ತೀರ್ಪು ಹೇಳಿದೆ.
ಚಿತ್ರದುರ್ಗದ ಜಗದ್ಗುರು ಮುರುಗರಾಜೇಂದ್ರ ವಿದ್ಯಾಪೀಠ ಮಠದ ಮುಖ್ಯಸ್ಥ ಡಾ. ಶಿವಮೂರ್ತಿ ಮುರುಘ ಶರಣರು ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ತೀರ್ಪು ನೀಡಿದೆ. ಈಗ ನ್ಯಾಯಾಲಯದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ವಿಚಾರಣೆಯಲ್ಲಿ ಶರಣರು ತಮ್ಮ ಪ್ರತಿವಾದದ ಭಾಗವಾಗಿ ಕಾಟನ್‌ಪೇಟೆ ಪೊಲೀಸರಿಂದ ಕೆಲವು ದಾಖಲೆಗಳನ್ನು ಕೋರಿದ್ದರು.
ಆದರೆ, ವಿಚಾರಣಾ ನ್ಯಾಯಾಲಯವು CrPC ಯ ಸೆಕ್ಷನ್ 91 ರ ಅಡಿಯಲ್ಲಿ ಸಲ್ಲಿಸಿದ್ದ ಮುರುಘ ಶರಣರ ಅರ್ಜಿಯನ್ನು ತಿರಸ್ಕರಿಸಿತು. ಹಾಗೂ, ಆರೋಪಿಯು RTI ಅರ್ಜಿಯ ಮೂಲಕ ಈ ದಾಖಲೆಗಳನ್ನು ಪಡೆಯಬಹುದು ಎಂಬ ಪ್ರಾಸಿಕ್ಯೂಷನ್‌ನ ವಾದವನ್ನು ಕೋರ್ಟ್ ಉಲ್ಲೇಖಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಶರಣರು ಹೈಕೋರ್ಟ್ ಮೆಟ್ಟಿಲೇರಿದ್ದರು.
"ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದಾಗ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲೆಗಳನ್ನು ಪಡೆಯಲು ಆರೋಪಿಯನ್ನು ಒತ್ತಾಯಿಸಲಾಗದು. ಇದು ಸಿಆರ್‌ಪಿಸಿಯ ಸೆಕ್ಷನ್ 91 ರ ಉದ್ದೇಶವಲ್ಲ. ಈ ಅರ್ಜಿಯನ್ನು ತಿರಸ್ಕರಿಸುವುದು ಮೇಲ್ನೋಟಕ್ಕೆ ಕಾನೂನುಬಾಹಿರವಾಗಿದೆ" ಎಂದು ನ್ಯಾಯಪೀಠ ಹೇಳಿದೆ.
ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಅರ್ಹರಾಗಿರುವ ದಾಖಲೆಗಳನ್ನು ಪಡೆಯಲು ಆರೋಪಿಯು ಆರ್‌ಟಿಐ ಕಾಯ್ದೆಯನ್ನು ಅವಲಂಬಿಸುವಂತೆ ಒತ್ತಾಯಿಸುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಆರ್‌ಟಿಐ ಅರ್ಜಿಯನ್ನು ಸಲ್ಲಿಸುವಂತಹ ಹೆಚ್ಚುವರಿ ಕಾರ್ಯವಿಧಾನಗಳ ಅಗತ್ಯವಿಲ್ಲದೆ, ಆರೋಪಿಯು ಪ್ರಾಸಿಕ್ಯೂಷನ್‌ನಿಂದ ನೇರವಾಗಿ ಸಂಬಂಧಿತ ದಾಖಲೆಗಳನ್ನು ಕೋರಲು ಅವಕಾಶ ನೀಡುವುದು ಸೆಕ್ಷನ್ 91 ರ ಉದ್ದೇಶ ಎಂದು ಅದು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದ್ದು, ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಶರಣರು ಅವರ ವಿನಂತಿಯನ್ನು ಎತ್ತಿಹಿಡಿದಿದೆ. ವಿಚಾರಣೆಯ ಸೂಕ್ತ ಹಂತದಲ್ಲಿ ವಿನಂತಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ನಿರ್ದೇಶಿಸಿತು.