
ಸೈಬರ್ ವಂಚಕನಿಗೆ ರಾಜಾತಿಥ್ಯ: ಆರೋಪಿ ಜೊತೆಗೆ ಸೆಲ್ಫಿ- ಮಂಗಳೂರು ಪೊಲೀಸ್ ಕಾನ್ಸ್‌ಟೆಬಲ್ ಸಸ್ಪೆಂಡ್, ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತುಕ್ರಮ
ಸೈಬರ್ ವಂಚಕನಿಗೆ ರಾಜಾತಿಥ್ಯ: ಆರೋಪಿ ಜೊತೆಗೆ ಸೆಲ್ಫಿ- ಮಂಗಳೂರು ಪೊಲೀಸ್ ಕಾನ್ಸ್‌ಟೆಬಲ್ ಸಸ್ಪೆಂಡ್, ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತುಕ್ರಮ
ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗೆ ರಾಜಾತಿಥ್ಯ ನೀಡಿರುವ ಮೂಲಕ ಮಂಗಳೂರಿನ ಉರ್ವ ಪೊಲೀಸರು ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.
ಇದೇ ಪ್ರಕರಣದಲ್ಲಿ ಆರೋಪಿ ಜೊತೆಗೆ ಜಾಲಿ ಟೂರ್ ನಡೆಸಿ ಸೆಲ್ಫಿ ತೆಗೆಸಿಕೊಂಡ ಉರ್ವ ಠಾಣೆಯ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಹೆಡ್ ಕಾನ್ಸ್‌ಟೆಬಲ್‌ನನ್ನು ಪೀಟರ್ ಡಿಸೋಜ ಎಂದು ಗುರುತಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ ಅಗರವಾಲ ಅವರು ಈ ಅಮಾನತು ಆದೇಶವನ್ನು ಜಾರಿಗೊಳಿಸಿದ್ದಾರೆ. ಇದೇ ವೇಳೆ, ಉರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭಾರತಿ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣದ ವಿವರ:
50 ಕೋಟಿ ರೂಪಾಯಿ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಂಧಿಸಲಾಗಿದ್ದ ಆರೋಪಿ ರಾಜ್‌ಕುಮಾರ್ ಎಂಬಾತನ ಜೊತೆಗೆ ಮಂಗಳೂರಿನ ಉರ್ವ ಪೊಲೀಸ್ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಕರಣದ ತನಿಖೆಗಾಗಿ, ಆರೋಪಿಯನ್ನು ರಾಜಸ್ತಾನದ ಜೈಪುರಕ್ಕೆ ಕರೆದೊಯ್ಯಲಾಗಿತ್ತು. ಆರೋಪಿಯ ಖರ್ಚಿನಲ್ಲೇ ವಿಮಾನದಲ್ಲಿ ಪೊಲೀಸರು ತೆರಳಿರುವುದು ಬಯಲಾಗಿತ್ತು.
ರಾಜಸ್ತಾನ ಭೇಟಿ ವೇಳೆ, ಪೊಲೀಸರು ಆರೋಪಿಯೊಂದಿಗೆ ಕೆಲವು ಪ್ರವಾಸಿ ತಾಣಗಳಿಗೂ ಭೇಟಿ ನೀಡಿದ್ದರು ಎಂದು ಖಚಿತ ಮಾಹಿತಿಯನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿತ್ತು.
ಆದರೆ, ಈ ಆರೋಪವನ್ನು ಪೊಲೀಸ್ ಕಮಿಷನರ್ ಅನುಪಮ ಅಗರವಾಲ ಅಲ್ಲಗಳೆದಿದ್ದಾರೆ.
ಹಲವು ಅನುಮಾನಗಳಿಗೆ ಕಾರಣವಾದ ಪೊಲೀಸರ ನಡೆ
ರಾಜಸ್ತಾನದ ಜೈಪುರಕ್ಕೆ ಆರೋಪಿ ಜೊತೆಗೆ ಪೊಲೀಸರ ನಾಲ್ಕು ಜನರ ತಂಡ ತೆರಳಿತ್ತು. ಈ ಭೇಟಿಯ ವೇಳೆ, ರಾಜಸ್ತಾನದ ಪ್ರವಾಸಿ ತಾಣಗಳ ಜಾಲಿ ಟೂರ್ ಕೂಡ ಮಾಡಲಾಗಿತ್ತು ಎಂದು ವರದಿಯಾಗಿತ್ತು.
ಆದರೆ, ಈ ತನಿಖಾ ಟೂರ್ ನಡೆಸಿದ್ದ ನಾಲ್ವರ ಪೈಕಿ ಒಬ್ಬರನ್ನು ಮಾತ್ರ ಸಸ್ಪೆಂಡ್ ಮಾಡಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಸೈಬರ್ ಆರೋಪಿಯೇ ಸಂಪನ್ಮೂಲ ವ್ಯಕ್ತಿ!
ಕಳ್ಳನಿಂದಲೇ ಕಳ್ಳತನ ತಡೆಯುವುದು ಹೇಗೆ ಎಂಬ ಬುದ್ಧಿಪಾಠ ಹೇಳಿಸಿಕೊಡುವ ಹೊಸ ಸಂಶೋಧನೆಯನ್ನು ಉರ್ವ ಪೊಲೀಸರು ಮಾಡಿದ್ದಾರೆ.
ಕೋಟಿಗಟ್ಟಲೆ ವಂಚನೆ ಮಾಡಿದ್ದ ಸೈಬರ್ ಆರೋಪಿ ಮೂಲಕ ಸೈಬರ್ ಸವಾಲುಗಳು ಎಂಬ ವಿಷಯದ ಬಗ್ಗೆ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳು ಮತ್ತು ಪೊಲಿಸರು ಫೋಟೋ ತೆಗೆಸಿಕೊಂಡಿದ್ದರು. ಈ ಕಾರ್ಯಾಗಾರದಲ್ಲಿ ಆರೋಪಿ ರಾಜಕುಮಾರನೇ ಸಂಪನ್ಮೂಲ ವ್ಯಕ್ತಿಯಾಗಿದ್ದ.
ತನಿಖೆಯ ಸಮಯದಲ್ಲಿ ಪೊಲೀಸ್ ಠಾಣೆಯ ಮೊದಲ ಮಹಡಿಯಲ್ಲಿ ಕೊಠಡಿಯಲ್ಲಿ ಐಷಾರಾಮಿ ಸೌಲಭ್ಯಗಳ ಜೊತೆಗೆ ರಾಜಾತಿಥ್ಯ ನೀಡಿರುವ ವಿಷಯವೂ ಬಹಿರಂಗವಾಗಿದ್ದು, ತನಿಖೆ ವೇಳೆ ಮತ್ತಷ್ಟು ಮಾಹಿತಿ ಬಯಲಾಗಬೇಕಿದೆ.
ಆರೋಪಿಗಳ ಖರ್ಚಿನಿಂದಲೇ ಟಿಕೆಟ್ ಬುಕ್ ಮಾಡಿಸಿರುವುದು ಸೇರಿದಂತೆ ಜಾಲಿ ಟೂರ್ ಮತ್ತು ಪೊಲೀಸರು ನಡೆಸಿದ ಅಕ್ರಮಗಳ ಬಗ್ಗೆ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಿದ್ದು, ಸೈಬರ್ ಎಸಿಪಿ ರವೀಶ್ ನಾಯ್ಕ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ.