ಇಮೇಲ್ ಮೂಲಕ ನೋಟೀಸ್, ಸಮನ್ಸ್: ರಾಜ್ಯದಲ್ಲಿ ಜಾರಿಯಾಗಲಿದೆ ಹೊಸ ನಿಯಮ
ಇಮೇಲ್ ಮೂಲಕ ನೋಟೀಸ್, ಸಮನ್ಸ್: ರಾಜ್ಯದಲ್ಲಿ ಜಾರಿಯಾಗಲಿದೆ ಹೊಸ ನಿಯಮ
ಕರ್ನಾಟಕದ ಎಲ್ಲ ನ್ಯಾಯಾಲಯಗಳು ಇನ್ನು ಮುಂದೆ ಇಮೇಲ್ ಮೂಲಕ ನೋಟೀಸ್ ಮತ್ತು ಸಮನ್ಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ನಡೆಸಲಿದೆ. ಈ ವ್ಯವಸ್ಥೆಗೆ ಅನುಕೂಲವಾಗುವಂತೆ ಅಗತ್ಯ ತಿದ್ದುಪಡಿ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ರಾಜ್ಯದ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಹೈಕೋರ್ಟ್ ರವಾನಿಸಿದ ಕರಡು ನಿಯಮಗಳನ್ನು ಫೆಬ್ರವರಿ 17ರಂದು ರಾಜ್ಯ ಸರ್ಕಾರ ಅನುಮೋದಿಸಿದ್ದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಅದರಂತೆ ಹೈಕೋರ್ಟ್, ನ್ಯಾಯಮಂಡಳಿಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳು ಎಲೆಕ್ಟ್ರಾನಿಕ್ ಮೇಲ್ ಮೂಲಕ ನೋಟೀಸ್ ಹಾಗೂ ಸಮನ್ಸ್‌ಗಳನ್ನು ಜಾರಿಗೊಳಿಸುವಂತೆ ಆದೇಶಿಸಲು ಅಧಿಕಾರ ಹೊಂದಿದೆ ಎಂದು ಆರ್. ದೇವದಾಸ್ ಅವರಿದ್ದ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಲಿಖಿತವಾಗಿ ತಿಳಿಸಿದೆ.
ಫೆಬ್ರವರಿ 11ರಂದು ಇ-ಮೇಲ್ ಮೂಲಕ ನೋಟೀಸ್ ಜಾರಿಗಾಗಿ ನಿಯಮಗಳನ್ನು ಅನುಮೋದಿಸುವ ತುರ್ತು ಅಗತ್ಯವಿದೆ. ಹಾಗಾಗಿ, ಹೈಕೋರ್ಟ್ ನಿಯಮಗಳ ತಿದ್ದುಪಡಿಗಾಗಿ ಮಾಡಿದ ಶಿಫಾರಸ್ಸಿನ ಸ್ಥಿತಿಗತಿಯ ಕುರಿತು ಫೆಬ್ರವರಿ 25ರೊಳಗೆ ಮಾಹಿತಿ ನೀಡಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಅದರಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿದ್ದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿಯನ್ನು ವಿಲೇ ಮಾಡಿದೆ.
ಪ್ರಕರಣದ ವಿವರ
ಇ ಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲು ಅಧಿಸೂಚನೆ ಹೊರಡಿಸುವಂತೆ ಪ್ರತಿವಾದಿ ಸರ್ಕಾರಕ್ಕೆ ನಿರ್ದೇಶನ ಹೊರಡಿಸುವಂತೆ ಕೋರಿ ಸುರೇಶ್ ಎಂಬವರು ಅರ್ಜಿ ಸಲ್ಲಿಸಿದ್ದರು.
ನ್ಯಾಯಪೀಠದ ಮುಂದೆ ಇನ್-ಪರ್ಸನ್ ಆಗಿ ವಾದ ಮಂಡಿಸಿದ್ದ ಅವರು, ದೆಹಲಿ, ಮುಂಬೈ ಹಾಗೂ ಇತರ ಹೈಕೋರ್ಟ್‌ಗಳಲ್ಲಿ ಇಮೇಲ್ ವ್ಯವಸ್ಥೆ ಮೂಲಕ ಸಮನ್ಸ್ ಮತ್ತು ನೋಟೀಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ವಾದಿಸಿದ್ದರು.