
ಡಿಸ್ಟ್ರಿಕ್ಟ್ ಜಡ್ಜ್ ಮನೆಗೆ ನುಗ್ಗಿದ ಕಳ್ಳರು! ಸಿಸಿಟಿವಿ ಕ್ಯಾಮೆರಾ ದಿಕ್ಕು ಬದಲಾಯಿಸಿ ಕಳ್ಳತನಕ್ಕೆ ಯತ್ನ!
ಡಿಸ್ಟ್ರಿಕ್ಟ್ ಜಡ್ಜ್ ಮನೆಗೆ ನುಗ್ಗಿದ ಕಳ್ಳರು! ಸಿಸಿಟಿವಿ ಕ್ಯಾಮೆರಾ ದಿಕ್ಕು ಬದಲಾಯಿಸಿ ಕಳ್ಳತನಕ್ಕೆ ಯತ್ನ!
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರೊಬ್ಬರಿಗೆ ಸೇರಿದ ಬಹುಮಹಡಿ ಕಟ್ಟಡದ ಫ್ಲ್ಯಾಟ್ ನಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನಕ್ಕೆ ಯತ್ನ ನಡೆದಿದೆ. ಸಾಕಷ್ಟು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ನಡೆದಿರುವ ಸಾಧ್ಯತೆ ಇದೆ.
ಅಪಾರ್ಟ್‌ಮೆಂಟಿನ ಹೊರ ಬದಿಯಲ್ಲಿ ಇರುವ ಸಿಸಿಟಿವಿ ಕ್ಯಾಮೆರಾವನ್ನು ಬೇರೆ ದಿಕ್ಕಿಗೆ ಬದಲಾಯಿಸಿ ಮುಖ್ಯ ಬಾಗಿಲಿನ ಬೀಗ ಹೊಡೆದು ಕಳ್ಳರು ಒಳಗೆ ನುಗ್ಗಿದ್ದಾರೆ. ಮನೆಯ ಒಳಗಿನ ನಾಲ್ಕು ಕೋಣೆಗಳನ್ನು ಜಾಲಾಡಿಸಿದ್ದಾರೆ.
ಆದರೆ, ಮನೆಯ ಒಳಗೆ ರಹಸ್ಯ ಸ್ಥಳದಲ್ಲಿ ಚಿನ್ನಾಭರಣ ಮತ್ತು ನಗದು ಇರಿಸಿದ್ದ ಕಾರಣ ಕಳ್ಳರ ಕೈಗೆ ಯಾವುದೇ ಬೆಲೆಬಾಳುವ ವಸ್ತು ಸಿಗದೇ ಸುರಕ್ಷಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಕಳ್ಳರು ಬರಿಗೈಯಲ್ಲಿ ವಾಪಸಾಗಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಬಳಿ ಈ ಕಳ್ಳತನದ ಯತ್ನ ನಡೆದಿದೆ. ಪಕ್ಷಿಕೆರೆ ನಿವಾಸಿ ಮಮ್ತಾಜ್ ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಪಕ್ಷಿಕೆರೆಯ ಕೊಕುಡೆ ಎಂಬಲ್ಲಿ ಬಹು ಮಹಡಿ ಕಟ್ಟಡದಲ್ಲಿ ಫ್ಲಾಟ್ ಹೊಂದಿದ್ದಾರೆ. ಬೆಂಗಳೂರಿನಿಂದ 15 ದಿನಗಳಿಗೊಮ್ಮೆ ಮಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಇದನ್ನು ಕಳ್ಳರ ತಂಡ ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಹಾಗಾಗಿಯೇ ವ್ಯವಸ್ಥಿತವಾಗಿ ಈ ಕೃತ್ಯ ನಡೆಸಿದೆ ಎನ್ನಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.