
ಅಪಘಾತ ವಿಮಾ ಪರಿಹಾರ: ಚಾಲಕ ಕುಡಿದ ಮತ್ತಿನಲ್ಲಿದ್ದರೂ ಸಂತ್ರಸ್ತರಿಗೆ ವಿಮೆ ಪಾವತಿ: ಹೈಕೋರ್ಟ್ ಮಹತ್ವದ ತೀರ್ಪು
ಅಪಘಾತ ವಿಮಾ ಪರಿಹಾರ: ಚಾಲಕ ಕುಡಿದ ಮತ್ತಿನಲ್ಲಿದ್ದರೂ ಸಂತ್ರಸ್ತರಿಗೆ ವಿಮೆ ಪಾವತಿ: ಹೈಕೋರ್ಟ್ ಮಹತ್ವದ ತೀರ್ಪು
ಅಪಘಾತದ ಸಂದರ್ಭದಲ್ಲಿ ಚಾಲಕ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರೂ ಸಂತ್ರಸ್ತರಿಗೆ ವಿಮಾ ಪರಿಹಾರ ಪಾವತಿಸಲು ಬರುವುದಿಲ್ಲ ಎಂದು ವಿಮಾ ಸಂಸ್ಥೆಯ ಹೇಳಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಮಿಳುನಾಡಿನ ಭುವನೇಶ್ವರಿ ಮತ್ತು ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ದಂಡಪಾಣಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿರುವ ಚಾಲಕರು ವಿಮಾ ಕಂಪೆನಿಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ವಿಮೆ ಪಾವತಿಸದೇ ಇರಲು ಕಾರಣವಲ್ಲ. ಅಪಘಾತಕ್ಕೆ ಕಾರಣವಾದ ವಾಹನಕ್ಕೆ ವಿಮೆ ನೀಡಿರುವ ಸಂಸ್ಥೆ ಸಂತ್ರಸ್ತರಿಗೆ ಪರಿಹಾರ ಪಾವತಿಸುವ ಹೊಣೆಯನ್ನು ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಚಾಲಕ ನಿಯಮಗಳನ್ನು ಗಾಳಿಗೆ ತೂರಿದ್ದರೆ ವಾಹನದ ಮಾಲಕ/ಚಾಲಕನಿಂದ ಪರಿಹಾರದ ಮೊತ್ತವನ್ನು ವಿಮಾ ಕಂಪೆನಿ ವಸೂಲಿ ಮಾಡಿಕೊಳ್ಳಬಹುದು ಎಂದು ಹಲವು ಪ್ರಕರಣಗಳಲ್ಲಿ ಹೇಳಲಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.