-->
ಗುತ್ತಿಗೆ ನೌಕರ ಸೇವೆಯಲ್ಲಿ ಇದ್ದಾಗ ಮೃತಪಟ್ಟರೆ ವಾರಿಸುದಾರರು ಅನುಕಂಪದ ಉದ್ಯೋಗಕ್ಕೆ ಅರ್ಹರೇ?- ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

ಗುತ್ತಿಗೆ ನೌಕರ ಸೇವೆಯಲ್ಲಿ ಇದ್ದಾಗ ಮೃತಪಟ್ಟರೆ ವಾರಿಸುದಾರರು ಅನುಕಂಪದ ಉದ್ಯೋಗಕ್ಕೆ ಅರ್ಹರೇ?- ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು

ಗುತ್ತಿಗೆ ನೌಕರ ಸೇವೆಯಲ್ಲಿ ಇದ್ದಾಗ ಮೃತಪಟ್ಟರೆ ವಾರಿಸುದಾರರು ಅನುಕಂಪದ ಉದ್ಯೋಗಕ್ಕೆ ಅರ್ಹರೇ?- ಕರ್ನಾಟಕ ಹೈಕೋರ್ಟ್‌ನ ಮಹತ್ವದ ತೀರ್ಪು





ಸರ್ಕಾರದ ಅಧೀನ ಪ್ರಾಧಿಕಾರಗಳಲ್ಲಿ ಗುತ್ತಿಗೆ ನೌಕರರಾಗಿದ್ದು, ನೌಕರಿಯಲ್ಲಿ ಇದ್ದಾಗ ಅವರು ಮೃತಪಟ್ಟರೆ ಅಂತಹ ಸಂದರ್ಭದಲ್ಲಿ ಅವರ ವಾರಿಸುದಾರರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ನೀಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಬಂಕಾಪುರ ಪಟ್ಟಣ ಪಂಚಾಯತ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾಗ ಮೃತಪಟ್ಟ ನಿಂಗಪ್ಪ ಬಡಿಗೇರ್ ಅವರ ವಾರಿಸುದಾರರು ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿದ್ದರು. ಅವರ ಮನವಿಯನ್ನು ತಿರಸ್ಕರಿಸಿ ನೀಡಿದ ಹಿಂಬರಹವನ್ನು ಪ್ರಶ್ನಿಸಿ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.


1995ರಿಂದ ಅರ್ಜಿದಾರರ ತಂದೆ ಬಂಕಾಪುರದ ಪಟ್ಟಣ ಪಂಚಾಯತ್‌ನಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಮೃತಪಟ್ಟಿದ್ದಾರೆ. ಆದರೆ, 1997ರ ಜನವರಿ 2ರಂದು ರಾಜ್ಯ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ್ದು, ಈ ಸುತ್ತೋಲೆಯಲ್ಲಿ, ಗುತ್ತಿಗೆ ನೌಕರರಾಗಿದ್ದವರು ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಕೋರುವ ಅರ್ಜಿಗಳನ್ನು ಪರಿಗಣಿಸುವಂತೆ ಹೇಳಲಾಗಿದೆ. ಹೀಗಾಗಿ, ಅರ್ಜಿದಾರರು ಅನುಕಂಪದ ಉದ್ಯೋಗದಲ್ಲಿ ನೇಮಕ ಮಾಡಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಅರ್ಜಿದಾರರ ತಂದೆ ಮೃತರಾದ 45 ದಿನಗಳಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ಕೋರಿ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು 8 ವರ್ಷಗಳ ಕಾಲ ಬಾಕಿ ಉಳಿಸಿಕೊಂಡು ಅಂತಿಮವಾಗಿ ತಿರಸ್ಕರಿಸಲಾಗಿದೆ. ಆದ್ದರಿಂದ ಈ ಅರ್ಜಿಯನ್ನು ಪುರಸ್ಕರಿಸುತ್ತಿದ್ದು, ಖಾಯಂ ಉದ್ಯೋಗಿಯಲ್ಲ ಎಂಬುದಾಗಿ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.


ಅರ್ಜಿದಾರರ ಪ್ರಕರಣವನ್ನು ಮರು ಪರಿಶೀಲನೆ ಮಾಡಲು ಅವಕಾಶ ನೀಡಿದ ನ್ಯಾಯಪೀಠ, ಪ್ರಕರಣವನ್ನು ಮರು ಪರಿಶೀಲನೆ ನಡೆಸಿ ಅಗತ್ಯ ದಾಖಲೆಗಳನ್ನು ಪಡೆದು ಅನುಕಂಪದ ಆಧಾರದ ಮೇಲೆ ನೇಮಕ ಮಾಡುವ ಬಗ್ಗೆ ಕಾನೂನುಪ್ರಕಾರವಾಗಿ ಸೂಕ್ತ ಆದೇಶ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ.


ಪ್ರಕರಣದ ವಿವರ

ನಿಂಗಪ್ಪ ಬಡಿಗೇರ್ ಬಂಕಾಪುರ ಪುರಸಭೆಯಲ್ಲಿ 1995ರಲ್ಲಿ ಪೌರಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ನೇಮಕವಾಗಿದ್ದರು. 2012ರ ಮಾರ್ಚ್‌ 4ರಂದು ಮೃತರಾದರು. 2012ರ ಏಪ್ರಿಲ್ 29ರಂದು ಅವರ ಪುತ್ರ ಅನುಕಂಪದ ನೆಲೆಯ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು.


ಈ ಅರ್ಜಿ ಸಲ್ಲಿಸಿ ಎಂಟು ವರ್ಷ ಕಳೆದರೂ ಬಂಕಾಪುರ ಪಟ್ಟಣ ಪಂಚಾಯತ್ ಯಾವುದೇ ಆದೇಶ ಹೊರಡಿಸಿರಲಿಲ್ಲ. 2020ರ ಅಕ್ಟೋಬರ್ 6ರಂದು ಅರ್ಜಿದಾರರಿಗೆ ಹಿಂಬರಹ ನೀಡಿ, ಅನುಕಂಪದ ನೆಲೆಯಲ್ಲಿ ಉದ್ಯೋಗ ನೀಡುವುದಿಲ್ಲ ಎಂದು ಹೇಳಿತ್ತು.


ಸೇವೆಯಲ್ಲಿ ಇದ್ದಾಗ ಮರಣ ಹೊಂದಿದ ದಿನಗೂಲಿ ಕಾರ್ಮಿಕರ ವಾರಿಸುದಾರರಿಗೆ ಅನುಕಂಪದ ನೆಲೆಯಲ್ಲಿ ನೇಮಕಾತಿ ಅರ್ಜಿಗಳನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ 1997ರ ಜನವರಿ 2ರಂದು ಸುತ್ತೋಲೆ ಹೊರಡಿಸಿದೆ. ಹೀಗಾಗಿ ಅರ್ಜಿಯನ್ನು ಪರಿಗಣಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್ ಮುಂದೆ ಕೋರಿಕೆ ಸಲ್ಲಿಸಿದ್ದರು.



Ads on article

Advertise in articles 1

advertising articles 2

Advertise under the article