.jpg)
ಸತ್ಯ ಮರೆಮಾಚಿ ನೇಮಕಾತಿ: ಕಾನ್ಸ್‌ಟೆಬಲ್ ಸೇವೆಯಿಂದ ಡಿಸ್‌ಮಿಸ್- ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಸತ್ಯ ಮರೆಮಾಚಿ ನೇಮಕಾತಿ: ಕಾನ್ಸ್‌ಟೆಬಲ್ ಸೇವೆಯಿಂದ ಡಿಸ್‌ಮಿಸ್- ಶಿಸ್ತು ಪ್ರಾಧಿಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ವಾಸ್ತವ ಮಾಹಿತಿ ಮರೆಮಾಚಿ ನೇಮಕಾತಿ ಪಡೆದ ಕೇಂದ್ರ ಮೀಸಲು ಪಡೆಯ ಕಾನ್ಸ್‌ಟೆಬಲ್ ನನ್ನು ಸೇವೆಯಿಂದ ವಜಾಗೊಳಿಸಿದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಕೇಂದ್ರ ಮೀಸಲು ಪೊಲೀಸ್ ಪಡೆಯಲಿ ಕಾನ್ಸ್ಟೇಬಲ್ ಹುದ್ದೆಯ ನೇಮಕಾತಿ ಸಂದರ್ಭದಲ್ಲಿ ತನ್ನ ವಿರುದ್ಧ ವಿಚಾರಣೆಗೆ ಬಾಕಿ ಇರುವ ಎರಡು ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಮರೆಮಾಚಿದ ಕಾರಣಕ್ಕೆ ಇಲಾಖಾ ವಿಚಾರಣೆ ನಡೆಸಿ ಸೇವೆಯಿಂದ ವಜಾಗೊಳಿಸಿದ ಶಿಸ್ತು ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಸುಪ್ರೀಂ ಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀಮತಿ ಹಿಮಾ ಕೊಹ್ಲಿ ಮತ್ತು ಶ್ರೀ ಅಹ್ಸಾನುದ್ದೀನ್ ಅಮಾನುಲ್ಲಾ ಇವರನ್ನೊಳಗೊಂಡ ವಿಭಾಗೀಯ ನ್ಯಾಯ ಪೀಠವು "ಭಾರತ ಒಕ್ಕೂಟ ಮತ್ತು ಇತರರು Vs ಶಿಶು ಪಾಲ್ ಯಾನೆ ಶಿವ ಪಾಲ್" ಈ ಪ್ರಕರಣದಲ್ಲಿ ದಿನಾಂಕ 23-7-2024 ರಂದು ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಶ್ರೀ ಶಿಶು ಪಾಲ್ ಯಾನೆ ಶಿವ ಪಾಲ್ ಎಂಬವರು 2011 ರಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯಲಿ ಕಾನ್ಸ್‌ಟೆಬಲ್ ಹುದ್ದೆಗೆ ಸೇರಿದರು. ನೇಮಕಾತಿಯ ಸಂದರ್ಭದಲ್ಲಿ ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ವಿಚಾರಣೆಯಲ್ಲಿ ಬಾಕಿ ಇಲ್ಲ ಮತ್ತು ತಾನು ಯಾವುದೇ ಅಪರಾಧ ಕೃತ್ಯದಲ್ಲಿ ಈ ಹಿಂದೆ ಭಾಗಿಯಾಗಿಲ್ಲ ಎಂಬ ಘೋಷಣೆ ನೀಡಿದ್ದರು.
ಇಲಾಖೆಯ ಪರಿಶೀಲನೆ ಸಂದರ್ಭದಲ್ಲಿ ಉದ್ಯೋಗಿಯ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳು ಭಾರತೀಯ ದಂಡ ಸಂಹಿತೆ ಮತ್ತು ಉತ್ತರ ಪ್ರದೇಶ ಗೂಂಡಾ ಕಾಯ್ದೆ ಅಡಿ ದಾಖಲಾದ ವಿಷಯ ಬೆಳಕಿಗೆ ಬಂತು. ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಪೊಲೀಸ್ ವೆರಿಫಿಕೆಶನ್ ಸಮಯದಲ್ಲಿ ತನ್ನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂಬ ಬಗ್ಗೆ ನಕಲಿ ಪೊಲೀಸ್ ಪರಿಶೀಲನಾ ದಾಖಲೆಗಳನ್ನು ಆಪಾದಿತ ಕಾನ್ಸ್ಟೇಬಲ್ ಶಿಶು ಪಾಲ್ ಇಲಾಖೆಗೆ ನೀಡಿದ್ದರು. ಸದರಿ ಪೊಲೀಸ್ ವೆರಿಫಿಕೇಶನ್ ವರದಿ ಸುಳ್ಳು ಎಂಬುದು ಬಳಿಕ ಇಲಾಖೆಯ ಅಧಿಕಾರಿಗಳ ಅವಗಾಹನೆಗೆ ಬಂತು.
ಪರಿಶೀಲನಾ ಪಟ್ಟಿಯಲ್ಲಿ ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಹಾಗೂ ವಿಚಾರಣೆ ಎದುರಿಸಿರುವ ಕುರಿತು ಘೋಷಣೆ ಮಾಡಬೇಕೆಂದು ಸ್ಪಷ್ಟವಾಗಿ ನಿರ್ದೇಶಿಸಲಾಗಿತ್ತು.
ಭಾರತೀಯ ದಂಡ ಸಂಹಿತೆ ಮತ್ತು ಉತ್ತರಪ್ರದೇಶ ಗೂಂಡಾ ಕಾಯ್ದೆಗಳ ಅಡಿ ಆರೋಪಗಳನ್ನು ಒಳಗೊಂಡಂತೆ ತನ್ನ ವಿರುದ್ಧ ಪ್ರಕರಣಗಳು ಬಾಕಿ ಇದೆ ಎಂಬ ವಿಷಯವನ್ನು ತಿಳಿದಿದ್ದರೂ ಅಪಾದಿತ ಉದ್ಯೋಗಿಯು ಪರಿಶೀಲನಾ ಪಟ್ಟಿಯಲ್ಲಿ ನಕಾರಾತ್ಮಕ ಮಾಹಿತಿ ನೀಡಿ ತನ್ನ ಹೇಳಿಕೆಯನ್ನು ಸಮರ್ಥಿಸುವ ನಕಲಿ ದಾಖಲೆಗಳನ್ನು ಸಹ ಸಲ್ಲಿಸಿದರು. ಈ ರೀತಿ ಸುಳ್ಳು ಮಾಹಿತಿ ನೀಡಿರುವುದನ್ನು ಗಂಭೀರ ದುರ್ನಡತೆ ಎಂದು ಪರಿಗಣಿಸಿದ ನೇಮಕಾತಿ ಪ್ರಾಧಿಕಾರವು ಶಿಶು ಪಾಲ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿತು.
ಕೇಂದ್ರ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1965 ರಡಿ ಆಪಾದಿತ ಕಾನ್ಸ್ಟೇಬಲ್ ವಿರುದ್ಧ ನಿಯಮಾನುಸಾರ ವಿಚಾರಣೆ ನಡೆಸಲಾಯಿತು. ವಾಸ್ತವ ಸಂಗತಿಗಳನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಟಿಸಿದ ಆರೋಪವು ವಿಚಾರಣೆಯಲ್ಲಿ ಸಾಬೀತಾದ ಕಾರಣ ಶಿಶು ಪಾಲ್ ಯಾನೆ ಶಿವ ಪಾಲ್ ನನ್ನು ಸೇವೆಯಿಂದ ವಜಾಗೊಳಿಸಲಾಯಿತು.
ಶಿಸ್ತು ಪ್ರಾಧಿಕಾರದ ಆದೇಶದಿಂದ ಬಾಧಿತರಾದ ಶಿಶು ಪಾಲ್ ಅವರು ಮೇಲ್ಮನವಿ ಪ್ರಾಧಿಕಾರದ ಸಮಕ್ಷಮ ಮೇಲ್ಮನವಿ ಸಲ್ಲಿಸಿದರು. ಸದರಿ ಮೇಲ್ಮನವಿಯನ್ನು ಪ್ರಾಧಿಕಾರವು ವಜಾ ಗೊಳಿಸಿತು. ಮೇಲ್ಮನವಿ ಪ್ರಾಧಿಕಾರದ ಆದೇಶದಿಂದ ಭಾದಿತರಾದ ಆಪಾದಿತ ಕಾನ್ಸ್ಟೇಬಲ್ ಶಿಶು ಪಾಲ್ ಅವರು ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ರದ್ದುಪಡಿಸಿ ತನ್ನನ್ನು ಸೇವೆಗೆ ಮರು ನಿಯುಕ್ತಿ ಗೊಳಿಸಬೇಕೆಂದು ಕೋರಿ ಗುವಾಹಟಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು.
ರಿಟ್ ಅರ್ಜಿದಾರರ ಪರವಾಗಿ ಗುವಾಹಟಿ ಹೈಕೋರ್ಟಿನಲ್ಲಿ ಈ ಕೆಳಗಿನ ವಾದ ಮಂಡಿಸಲಾಯಿತು. ಪರಿಶೀಲನಾ ಪಟ್ಟಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಅರ್ಜಿದಾರರಿಗೆ ಮಾಹಿತಿಯ ಕೊರತೆ ಇತ್ತು. ಅರ್ಜಿದಾರರು ಚಿಕ್ಕ ವಯಸ್ಸಿನವರಾದ ಕಾರಣ ಮಾಹಿತಿಯನ್ನು ಒದಗಿಸದೆ ಇರುವುದು ಗಂಭೀರ ವಿಷಯ ಎಂಬುದು ಅವರಿಗೆ ತಿಳಿದಿರಲಿಲ್ಲ.
ಯಾವುದೇ ದುರುದ್ದೇಶ ಅಥವಾ ಕ್ರಿಮಿನಲ್ ಉದ್ದೇಶವನ್ನು ಅರ್ಜಿದಾರರು ಹೊಂದಿಲ್ಲ ಎಂಬ ಅಂಶವನ್ನು ಕ್ರಿಮಿನಲ್ ಪ್ರಕರಣದಲ್ಲಿ ದಾಖಲಿಸಿ ಅರ್ಜಿದಾರರನ್ನು ಖುಲಾಸೆಗೊಳಿಸಲಾಗಿದೆ. ಈ ರೀತಿ ತಪ್ಪು ತಿಳುವಳಿಕೆ ಹೊಂದಿ ಮಾಡಿರುವ ಅಚಾತುರ್ಯಕ್ಕೆ ಸೇವೆಯಿಂದ ವಜಾ ಗೊಳಿಸಿರುವ ಶಿಕ್ಷೆ ನೀಡಿರುವುದು ಅಸಮಾನವಾಗಿದೆ. ಆದುದರಿಂದ ಸೇವೆಯಿಂದ ವಜಾ ಮಾಡಲಾದ ಆದೇಶವನ್ನು ರದ್ದುಪಡಿಸಿ ಎಲ್ಲಾ ಸೇವಾ ಸವಲತ್ತುಗಳೊಂದಿಗೆ ಅರ್ಜಿದಾರರನ್ನು ಸೇವೆಗೆ ಮರು ನಿಯುಕ್ತಿಗೊಳಿಸಬೇಕಾಗಿ ಪ್ರಾರ್ಥಿಸಲಾಯಿತು.
ಸರಕಾರ ಹಾಗೂ ಶಿಸ್ತು ಪ್ರಾಧಿಕಾರದ ಪರವಾಗಿ ಈ ಕೆಳಗಿನ ವಾದ ಮಂಡಿಸಲಾಯಿತು. ರಿಟ್ ಅರ್ಜಿದಾರರು ನಿರ್ವಹಿಸುವ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹುದ್ದೆಗೆ ಅತ್ಯವಶ್ಯಕವಾಗಿರುವ ನಂಬಿಕೆಯನ್ನು ಉಲ್ಲಂಘಿಸುವ ಮೂಲಕ ತನ್ನ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿರುತ್ತಾರೆ. ಪರಿಶೀಲನೆಯ ಸಮಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ದಾರಿ ತಪ್ಪಿಸುವ ಉದ್ದೇಶವನ್ನು ತೋರಿಸುತ್ತದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಆಯ್ಕೆಗೆ ಉನ್ನತ ಮಾನದಂಡಗಳಿವೆ. ಇಲಾಖೆಯಲ್ಲಿ ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡುವುದು ಅತ್ಯುನ್ನತ ವೆಂದು ಪರಿಗಣಿಸಲ್ಪಟ್ಟಿದೆ. ತನ್ನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಬಹಿರಂಗಪಡಿಸುವ ಮಾನದಂಡಗಳನ್ನು ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿರುತ್ತದೆ. ಶಿಕ್ಷೆಯ ಪ್ರಮಾಣ ಅಸಮಾನವಾಗಿಲ್ಲ. ಆದುದರಿಂದ ಅರ್ಜಿಯನ್ನು ವಜಾ ಗೊಳಿಸಬೇಕಾಗಿ ಪ್ರಾರ್ಥಿಸಿದರು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಗುವಾಹಟಿ ಹೈಕೋರ್ಟಿನ ಏಕ ಸದಸ್ಯ ನ್ಯಾಯ ಪೀಠವು ಸೇವೆಯಿಂದ ವಜಾ ಗೊಳಿಸುವ ಶಿಸ್ತು ಪ್ರಾಧಿಕಾರ ದಂಡನೆಯು ತಪ್ಪಿತಸ್ಥ ನೌಕರರ ವಿರುದ್ಧ ಹೊರಿಸಲಾದ ಆರೋಪಗಳಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣಕ್ಕಿಂತಲೂ ಹೆಚ್ಚಿನದ್ದಾಗಿದೆ ಎಂಬ ಅಭಿಪ್ರಾಯದೊಂದಿಗೆ ವಜಾ ಆದೇಶವನ್ನು ರದ್ದುಗೊಳಿಸಿ ಭಾಗಶಃ ವೇತನದೊಂದಿಗೆ ರಿಟ್ ಅರ್ಜಿದಾರರನ್ನು ಸೇವೆಗೆ ಮರು ನಿಯುಕ್ತಿಗೊಳಿಸುವಂತೆ ಆದೇಶಿಸಿತು. ಏಕ ಸದಸ್ಯ ನ್ಯಾಯ ಪೀಠವು ನೀಡಿದ ಆದೇಶದಿಂದ ಭಾದಿತರಾದ ಸರಕಾರವು ಗುವಾಹಟಿ ಹೈಕೋರ್ಟಿನ ವಿಭಾಗೀಯ ನ್ಯಾಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದ ವಿಭಾಗೀಯ ನ್ಯಾಯಪೀಠವು ಕೇಂದ್ರ ಸರಕಾರವು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು.
ಗುವಾಹಟಿ ಹೈಕೋರ್ಟಿನ ವಿಭಾಗೀಯ ನ್ಯಾಯಪೀಠದ ಆದೇಶದಿಂದ ಬಾಧಿತರಾದ ಸರಕಾರ/ಶಿಸ್ತು ಪ್ರಾಧಿಕಾರವು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಿವಿಲ್ ಮೇಲ್ಮನವಿ ಸಂಖ್ಯೆ 7933/2024 ಅನ್ನು ದಾಖಲಿಸಿತು.
ಮೇಲ್ಮನವಿಯಲ್ಲಿ ನೌಕರರನ್ನು ಸೇವೆಯಿಂದ ವಜಾ ಗೊಳಿಸಿದ ಆದೇಶ ಸಮರ್ಥನೀಯವೇ ಎಂಬ ಅಂಶವನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿತು. ಈ ಕೆಳಗಿನ ಕಾನೂನಾತ್ಮಕ ಅಂಶಗಳನ್ನು ಸುಪ್ರೀಂ ಕೋರ್ಟಿನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಎತ್ತಲಾಯಿತು.
1) ಪರಿಶೀಲನಾ ಪಟ್ಟಿಯಲ್ಲಿ ಆಪಾದಿತ ಕಾನ್ಸ್‌ಟೆಬಲ್ ಮಹತ್ವದ ಸಂಗತಿಗಳನ್ನು ಮರೆಮಾಚಿರುವುದು ಗಂಭೀರ ದುರ್ನಡತೆಯಾಗಿದೆಯೇ?
2) ಆಪಾದಿತ ಕಾನ್ಸ್‌ಟೆಬಲ್ ನನ್ನು ಸೇವೆಯಿಂದ ವಜಾಗೊಳಿಸಿರುವುದು ಆತನು ಎಸಗಿದ ದುರ್ನಡತೆಗೆ ಅನುಗುಣವಾಗಿದೆಯೇ?
3) ಶಿಸ್ತು ಪ್ರಾಧಿಕಾರದ ಆದೇಶವನ್ನು ಬದಲಾಯಿಸಿ ಆಪಾದಿತ ನನ್ನು ಸೇವೆಗೆ ಮರು ನಿಯುಕ್ತಿಗೊಳಿಸಿರುವ ತೀರ್ಪು ನೀಡಿ ಹೈಕೋರ್ಟ್ ತಪ್ಪು ಮಾಡಿದೆಯೇ?
ಆಪಾದಿತ ಕಾನ್ಸ್ಟೇಬಲ್ ಶಿಶು ಪಾಲ್ ನಾನೆ ಶಿವಪಾಲ್ ಅವರು ಉದ್ದೇಶಪೂರ್ವಕವಾಗಿ ವಾಸ್ತವಿಕ ಸಂಗತಿಗಳನ್ನು ಮರೆಮಾಚಿರುವುದು ಆತನನ್ನು ಸೇವೆಯಿಂದ ವಜಾಗೊಳಿಸುವ ಆದೇಶವನ್ನು ಸಮರ್ಥಿಸುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ಕೇಂದ್ರ ಮೀಸಲು ಪೊಲೀಸ್ ಪಡೆಯ ಸೂಕ್ಷ್ಮ ಹುದ್ದೆಗಳಲ್ಲಿ ಪ್ರಾಮಾಣಿಕತೆಯ ಅಗತ್ಯವನ್ನು ಅದು ಒತ್ತಿ ಹೇಳಿದೆ.
ಕಾನೂನು ಮತ್ತು ಸುರಕ್ಷತೆ ಕಾಪಾಡುವ ಸಂಸ್ಥೆಗಳು ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸುಪ್ರೀಂ ಕೋರ್ಟ್ ಗಮನಿಸಿದೆ. ಮಾಹಿತಿ ಬಹಿರಂಗ ಪಡಿಸುವಿಕೆಯಲ್ಲಿನ ಸಣ್ಣಪುಟ್ಟ ಲೋಪಗಳು ಸಹ ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸಬಹುದು. ಉದ್ಯೋಗ ಪರಿಶೀಲನೆಯಲ್ಲಿ ಪೂರ್ಣ ಮತ್ತು ಸತ್ಯವಾದ ಮಾಹಿತಿಗಳ ಬಹಿರಂಗಪಡಿಸುವಿಕೆ ಕಡ್ಡಾಯವಾಗಿದೆ. ಉದ್ಯೋಗದಾತರು ಲೋಪಗಳ ಸ್ವರೂಪ ಮತ್ತು ಗಂಭೀರತೆಯನ್ನು ಮೌಲ್ಯಮಾಪನ ಮಾಡಬೇಕು. ಸಮಗ್ರತೆಯ ಮಾನದಂಡಗಳು ಪಾತ್ರಗಳ ಸೂಕ್ಷ್ಮತೆಗೆ ಹೊಂದಿಕೆಯಾಗಬೇಕು.
ಶಿಸ್ತು ಪ್ರಾಧಿಕಾರದ ನಿರ್ಧಾರವು ಸಾರ್ವಜನಿಕ ಸೇವೆಯಲ್ಲಿ ವಿಶೇಷವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಮಗ್ರತೆಯ ಪ್ರಾಮುಖ್ಯತೆಯಡಿ ಸಮರ್ಥನೀಯವಾಗಿದೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ನ ವಿಭಾಗೀಯ ನ್ಯಾಯಪೀಠವು ಗುವಾಹಾಟಿ ಹೈಕೋರ್ಟಿನ ತೀರ್ಪನ್ನು ರದ್ದುಪಡಿಸಿ ಆಪಾದಿತ ಕಾನ್ಸ್ಟೇಬಲ್ ಶಿಶು ಪಾಲ್ ಯಾನೆ ಶಿವಪಾಲ್ ನನ್ನು ಸೇವೆಯಿಂದ ವಜಾಗೊಳಿಸಿದ ಶಿಸ್ತು ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರದ ಆದೇಶಗಳನ್ನು ಎತ್ತಿ ಹಿಡಿಯಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ