
ಕಪ್ಪುಪಟ್ಟಿಗೆ ಸೇರ್ಪಡೆ ಪ್ರಕರಣ: ಆರ್‌ಟಿಐ ಕಾರ್ಯಕರ್ತನಿಂದ ಲಕ್ಷ ರೂ. ಲಂಚ ಪಡೆದ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅರೆಸ್ಟ್
ಕಪ್ಪುಪಟ್ಟಿಗೆ ಸೇರ್ಪಡೆ ಪ್ರಕರಣ: ಆರ್‌ಟಿಐ ಕಾರ್ಯಕರ್ತನಿಂದ ಲಕ್ಷ ರೂ. ಲಂಚ ಪಡೆದ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅರೆಸ್ಟ್
ಕಪ್ಪು ಪಟ್ಟಿಯಿಂದ ಕೈಬಿಡಲು ಅರ್ಜಿದಾರರಿಂದ 1 ಲಕ್ಷ ರೂಪಾಯಿ ಮೊತ್ತದ ಲಂಚಕ್ಕೆ ಕೈಯೊಡ್ಡಿದ ಆರೋಪದ ಮೇಲೆ ಮಾಹಿತಿ ಆಯೋಗದ ಆಯುಕ್ತ ರವೀಂದ್ರ ಗುರುನಾಥ ಡಾಕಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕಲಬುರ್ಗಿ ಕಲರವ ಮಾಸ ಪತ್ರಿಕೆಯ ಸಂಪಾದಕ ಸಾಯಿಬಣ್ಣ ನಾಸಿ ಅವರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸಾಯಿಬಣ್ಣ ಅವರು ಮಾಹಿತಿ ಹಕ್ಕು ಕಾಯ್ದೆಯ ಅಡಿ 117 ಅರ್ಜಿಗಳನ್ನು ಸಲ್ಲಿಸಿದ್ದರು. ವೈಯಕ್ತಿಕ ಹಿತಾಸಕ್ತಿಗೆ ಮಾಹಿತಿ ಕೇಳಿದ್ದಾರೆ ಎಂದು ಮಾಹಿತಿ ಆಯುಕ್ತರು ಏಕಪಕ್ಷೀಯವಾಗಿ ತೀರ್ಮಾನ ಮಾಡಿ, ಆ 117 ಅರ್ಜಿಗಳನ್ನು ವಜಾಗೊಳಿಸಿದ್ದರು.
ಇದರ ಜೊತೆಗೆ, ಸಾಯಿಬಣ್ಣ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದರು ಹಾಗೂ ಒಂದು ಅರ್ಜಿಗೆ 1000/- ರೂ. ದಂಡ ವಿಧಿಸಿದ್ದರು. ಉಳಿದ 116 ಅರ್ಜಿಗಳ ಮೇಲ್ಮನವಿ ವಿಚಾರಣೆಯ ಆದೇಶ ಪ್ರತಿ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಯಿಬಣ್ಣ ಅವರ ಹೆಸರನ್ನು ಕಪ್ಪುಪಟ್ಟಿಯಿಂದ ಕೈಬಿಡಲು ಡಾಕಪ್ಪ ಅವರು ಮೂರು ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಡಾಕಪ್ಪ ಅವರು ಗುರುವಾರ ಲಂಚದ ಹಣ ಒಂದು ಲಕ್ಷ ರೂ.ಗಳನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ ಬಳಿಕ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಎಸ್‌ಪಿ ಉಮೇಶ್ ಬಿ.ಕೆ. ಮಾಹಿತಿ ನೀಡಿದ್ದಾರೆ. ಡಿವೈಎಸ್‌ಪಿ ಗೀತಾ ಬೇನಾಳ, ಇನ್ಸ್‌ಪೆಕ್ಟರ್ ಅರುಣ್‌ಕುಮಾರ್, ಸಿಬ್ಬಂದಿ ಮಲ್ಲಿನಾಥ, ಹನುಮಂತ, ಬಸವರಾಜ ಕಾರ್ಯಾಚರಣೆಯಲ್ಲಿ ಇದ್ದರು.