
ಎಎಬಿ ನಿರ್ಣಯಕ್ಕೆ ನ್ಯಾ. ನಟರಾಜನ್ ತೀವ್ರ ಅಸಮಾಧಾನ: ನಿರ್ಣಯ ವಾಪಸ್ ಪಡೆಯುವಂತೆ ಹಿರಿಯ ವಕೀಲರ ಆಗ್ರಹ- ಭಾಗಶಃ ವಿಚಾರಣೆ ನಡೆಸಿದ್ದ ಪ್ರಕರಣ ಬಿಡುಗಡೆ ಆದೇಶ
ಎಎಬಿ ನಿರ್ಣಯಕ್ಕೆ ನ್ಯಾ. ನಟರಾಜನ್ ತೀವ್ರ ಅಸಮಾಧಾನ: ನಿರ್ಣಯ ವಾಪಸ್ ಪಡೆಯುವಂತೆ ಹಿರಿಯ ವಕೀಲರ ಆಗ್ರಹ- ಭಾಗಶಃ ವಿಚಾರಣೆ ನಡೆಸಿದ್ದ ಪ್ರಕರಣ ಬಿಡುಗಡೆ ಆದೇಶ
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಗೌರವಾನ್ವಿತ ಕೆ. ನಟರಾಜನ್ ಅವರನ್ನು ಉಲ್ಲೇಖಿಸಿ ಬೆಂಗಳೂರು ವಕೀಲರ ಸಂಘ(ಎಎಬಿ) ಮಾಡಿರುವ ನಿರ್ಣಯ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ಠರಾವಿನ ಬಗ್ಗೆ ಸ್ವತಃ ನ್ಯಾಯಮೂರ್ತಿ ಕೆ. ನಟರಾಜನ್ ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ವಕೀಲರು ನೇರವಾಗಿ ತಮ್ಮ ಮುಂದೆ ವಿಚಾರ ಪ್ರಸ್ತಾಪಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.
ಬೆಂಗಳೂರು ವಕೀಲರ ಸಂಘ(ಎಎಬಿ) ಅಧ್ಯಕ್ಷರಿಗೆ ದೂರು ನೀಡಿರುವ ವಕೀಲರು ಮುಂದೆ ಬಂದು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳನ್ನು ಬಿಡುಗಡೆ ಮಾಡುವಂತೆ ಕೋರಬಹುದು. ಎಲ್ಲ ಪ್ರಕರಣಗಳನ್ನು ನಾನೇಕೆ ಇಟ್ಟುಕೊಳ್ಳಲಿ.. ಎಂದು ಹೇಳಿರುವ ನ್ಯಾಯಮೂರ್ತಿಗಳು ಈ ಬಗ್ಗೆ ನಿರ್ಣಯ ಕೈಗೊಂಡಿರುವುದು ಅಸಮರ್ಪಕ ಕ್ರಮ ಎಂದು ತಿಳಿಸಿದರು.
ಬೆಂಗಳೂರು ವಕೀಲರ ಸಂಘ(ಎಎಬಿ) ತನ್ನ ನಿರ್ಣಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. ಇದು ನ್ಯಾಯಾಲಯದ ಘನತೆ ಮತ್ತು ವರ್ಚಸ್ಸಿಗೆ ಹಾನಿ ಮಾಡುತ್ತದೆ. ದೆಹಲಿ ಪ್ರಕರಣದ ಜೊತೆಗೆ ನನ್ನ ಹೆಸರನ್ನು ಉಲ್ಲೇಖ ಮಾಡಲಾಗಿದೆ.. ಇದರ ಅಗತ್ಯವೇನಿತ್ತು? ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನ ನಿಯಂತ್ರಣ ಮೀರಿ ಕೆಲವು ಪ್ರಕರಣಗಳು ಭಾಗಶಃ ವಿಚಾರಣೆಗೆ ಬಾಕಿ ಇದ್ದು, ನ್ಯಾಯಾಲಯದಲ್ಲಿ ಉಳಿದಿವೆ. ಕೆಲವು ಪ್ರಕರಣಗಳಲ್ಲಿ ವಕೀಲರು ವಾದಿಸಲು ಸಿದ್ದರಿಲ್ಲ ಅಥವಾ ಬೇರೆ ಪ್ರಕರಣಗಳಲ್ಲಿ ಸಮಯ ಮೀರಿ ವಾದಿಸಬಹುದು ಅಥವಾ ನಿರ್ದಿಷ್ಟ ದಿನದಂದು ಹಲವು ಪ್ರಕರಣಗಳು ಪಟ್ಟಿಯಾಗುವುದರಿಂದ ಅವು ಸಮಯ ಮೀರಿ ವಿಚಾರಣೆಗೆ ಬರದೇ ಬಾಕಿ ಉಳಿದಿರಬಹುದು ಎಂದು ನ್ಯಾಯಮೂರ್ತಿ ಕೆ. ನಟರಾಜನ್ ಅಭಿಪ್ರಾಯಪಟ್ಟಿದ್ದಾರೆ. ಹಹ
ತಮ್ಮ ನ್ಯಾಯಾಲಯದಲ್ಲಿ ಸುಮಾರು 16,000 ಪ್ರಕರಣಗಳು ಬಾಕಿ ಉಳಿದಿವೆ. ನ್ಯಾಯಮೂರ್ತಿಯೊಬ್ಬರು ನಿವೃತ್ತರಾದ ಕಾರಣ ಅವರ ನ್ಯಾಯಾಲಯದಲ್ಲಿ ಇದ್ದ 5000 ಪ್ರಕರಣಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಕರಣವನ್ನು ಐದೇ ನಿಮಿಷದಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಸಾಧ್ಯವೇ..? ಹಿರಿಯ ವಕೀಲರು ತಾಸುಗಟ್ಟಲೆ ವಾದಿಸುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಚೇರಿ ಸಮಯ ಮೀರಿ ನಾನು ಪ್ರಕರಣಗಳ ವಿಚಾರಣೆ ನಡೆಸುತ್ತೇನೆ ಎಂದು ಅವರು ವಿವರಿಸಿದ್ದಾರೆ.
ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣವನ್ನು ತಾನೇ ವಿಚಾರಣೆ ನಡೆಸಬೇಕು ಎಂದು ವಕೀಲರು ಬಯಸಿದರೂ ಎಎಬಿ ನಿರ್ಣಯ ಕೈಗೊಂಡ ಕಾರಣ, ತನಗೆ ಆ ಪ್ರಕರಣದ ವಿಚಾರಣೆ ನಡೆಸುವ ಇಚ್ಚೆ ಇಲ್ಲ. ಈ ಬಗ್ಗೆ ಸಮಸ್ಯೆ ಇದ್ದರೆ ಸಂಬಂಧಪಟ್ಟ ವಕೀಲರು ಲಿಖಿತವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿ, ಆ ಪ್ರಕರಣಗಳನ್ನು ಪುನಃ ತಮ್ಮ ಮುಂದೆ ಪಟ್ಟಿ ಮಾಡಲು ಕೋರಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ವಿವೇಕ್ ಸುಬ್ಬಾರೆಡ್ಡಿ ಅವರ ತಂದೆ ಕೆ.ಎನ್. ಸುಬ್ಬಾರೆಡ್ಡಿ ವಿಚಾರಣೆಯಲ್ಲಿ ಭಾಗಿಯಾಗಿದ್ದ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣವನ್ನೂ ನ್ಯಾ. ನಟರಾಜನ್ ಬಿಡುಗಡೆ ಮಾಡಿದರು.
ಈ ಪ್ರಕರಣ ಬಹುತೇಕ ವಿಚಾರಣೆ ನಡೆಸಲಾಗಿದೆ. ಕೆ.ಎನ್. ಸುಬ್ಬಾರೆಡ್ಡಿ ಅವರ ಪುತ್ರ ಎಎಬಿ ಅಧ್ಯ್ಷಕ್ಷರಾಗಿದ್ದಾರೆ. ಅವರೇ ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣ ಬಿಡುಗಡೆ ಸಂಬಂಧ ನಿರ್ಣಯ ಪಾಸ್ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣದ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ನ್ಯಾ. ನಟರಾಜನ್ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 24ರಂದು ವಿಶೇಷ ಸಭೆ ನಡೆಸಿದ್ದ ಬೆಂಗಳೂರು ವಕೀಲರ ಸಂಘ ವಿವಾದಿತ ನಿರ್ಣಯ ಕೈಗೊಂಡಿತ್ತು. ನ್ಯಾ. ಕೆ. ನಟರಾಜನ್ ಅವರ ಮುಂದೆ ವಿನಾ ಕಾರಣ ಹಲವು ಭಾಗಶಃ ವಿಚಾರಣೆ ನಡೆಸಿರುವ ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಲಾಗಿತ್ತು.
ಈ ನಿರ್ಣಯದ ಬೆನ್ನಲ್ಲೇ ಭಾರತೀಯ ವಕೀಲರ ಪರಿಷತ್ ಪದಾಧಿಕಾರಿ ಸದಾಶಿವ ರೆಡ್ಡಿ, ಬೆಂಗಳೂರು ವಕೀಲರ ಸಂಘ ಮಾಜಿ ಅಧ್ಯಕ್ಷ ಎ.ಪಿ. ರಂಗನಾಥ್ ಸೇರಿದಂತೆ ಹಲವು ವಕೀಲರು ಈ ನಿರ್ಣಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ವಿಶೇಷ ಸಭೆಯಲ್ಲಿ ಚರ್ಚಿಸಿದ ವಿಚಾರಗಳೇ ಬೇರೆ, ಹಂಚಿಕೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿರುವ ನಿರ್ಣಯಗಳೇ ಬೇರೆಯಾಗಿವೆ. ತಕ್ಷಣ ಅದನ್ನು ವಿವೇಕ್ ಸುಬ್ಬಾರೆಡ್ಡಿ ಅವರು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ನ್ಯಾ. ನಟರಾಜನ್ ಅವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಹೇಳಿಕೆಯನ್ನೂ ಅವರು ಪ್ರಶ್ನಿಸಿದ್ದರು.