
ವಿಡಂಬನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ: ಮಹಾರಾಷ್ಟ್ರದಲ್ಲಿ ತಲ್ಲಣ ಎಬ್ಬಿಸಿದ್ದ ಹಾಸ್ಯ ಕಲಾವಿದ ಕುನಾಲ್ ಕಮ್ರಾಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು
ವಿಡಂಬನೆಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ: ಮಹಾರಾಷ್ಟ್ರದಲ್ಲಿ ತಲ್ಲಣ ಎಬ್ಬಿಸಿದ್ದ ಹಾಸ್ಯ ಕಲಾವಿದ ಕುನಾಲ್ ಕಮ್ರಾಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಇಲ್ಲ. ವಾಕ್ ಸ್ವಾತಂತ್ರ್ಯದ ಭಾಗವಾಗಿ ಮಾಡಲಾಗುವ ರಾಜಕೀಯ ವಿಡಂಬನೆಗೆ ಕಾನೂನು ರಕ್ಷಣೆ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದ್ದು, ಮಹಾರಾಷ್ಟ್ರದಲ್ಲಿ ತಲ್ಲಣ ಎಬ್ಬಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಹಾಸ್ಯ ಕಲಾವಿದ (ಸ್ಟ್ಯಾಂಡ್ ಅಪ್ ಕಮೀಡಿಯನ್) ಕುನಾಲ್ ಕಮ್ರಾ ಅವರಿಗೆ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಸುಂದರ್ ಮೋಹನ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಂದ ದೈಹಿಕ ಹಿಂಸೆ ಹಾಗೂ ಜೀವ ಬೆದರಿಕೆ ಇರುವುದರಿಂದ ಕಮ್ರಾ ಅವರಿಗೆ ಮಹಾರಾಷ್ಟ್ರದ ನ್ಯಾಯಾಲಯಗಳ ಮೆಟ್ಟಿಲೇರಲು ಆಗುತ್ತಿಲ್ಲ ಎಂಬುದನ್ನು ಕಮ್ರಾ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಇದಕ್ಕೆ ಪೂರಕವಾಗಿ ಹಲವು ಪತ್ರಿಕೆಗಳ ಸುದ್ದಿ ವರದಿಯನ್ನು ಹಾಜರುಪಡಿಸಿದ್ದರು.
ಟ್ರಾನ್ಸಿಟ್ ಜಾಮೀನು ಅಂದರೇನು..?
ಯಾವುದೇ ವ್ಯಕ್ತಿಯ ವಿರುದ್ಧ ಬೇರೆ ರಾಜ್ಯದಲ್ಲಿ ಎಫ್‌ಐಆರ್ ದಾಖಲಾಗಿದ್ದರೆ, ಅಂತಹ ವ್ಯಕ್ತಿಯು ತನ್ನ ಸ್ವಂತ ರಾಜ್ಯದಲ್ಲಿ ಬಂಧನಪೂರ್ವ ಜಾಮೀನು ಪಡೆಯುವುದನ್ನು ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಎಂದು ಕರೆಯಲಾಗುತ್ತದೆ.
ಈ ಪ್ರಕರಣದ ಆರೋಪಿತರಾದ ಕುನಾಲ್ ಕಮ್ರಾ ಅವರು ತಮಿಳುನಾಡಿನ ವಿಲ್ಲುಪರಂ ಜಿಲ್ಲೆಯ ನಿವಾಸಿಯಾಗಿದ್ದು, ಅವರ ವಿರುದ್ಧ ಮುಂಬೈ ಸಹಿತ ಮಹಾರಾಷ್ಟ್ರದ ಹಲವೆಡೆ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಮ್ರಾ ಅವರು ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಶಾರುಖ್ ಖಾನ್ ಅಭಿನಯದ ಜನಪ್ರಿಯ ಹಿಂದಿ ಫಿಲ್ಮ್ "ದಿಲ್‌ತೋ ಪಾಗಲ್ ಹೇ"ನ ಭೋಲಿ ಸಿ ಸೂರತ್ ಹಾಡನ್ನು ವಿಡಂಬನೆಯಲ್ಲಿ ಬಳಸಿದ್ದ ಕುನಾಲ್ ಕಮ್ರಾ ಶಿವಸೇನೆಯ ಮನೋಹರ್ ಶಿಂಧೆಯನ್ನು ಅಣಕಿಸಿದ್ದರು. ದೇವೇಂದ್ರ ಫಡ್ನವಿಸ್ ಅವರ ಜೊತೆಗಿನ ಮೈತ್ರಿಗೆ ಮಾತಿನ ಬಾಣದ ಮೂಲಕ ತಿವಿದಿದ್ದರು.
ಆದರೆ, ಕಮ್ರಾ ತಮ್ಮ ಕಾರ್ಯಕ್ರಮದಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನೂ ಉಚ್ಚರಿಸಿರಲಿಲ್ಲ. ಅವರಿಗೆ ಮತ್ತು ಅವರ ಮಾತುಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಕಾನೂನಿನಾತ್ಮಕ ರಕ್ಷಣೆ ಇದೆ ಎಂದು ಕುನಾಲ್ ಕಮ್ರಾ ಅವರ ಪರ ವಕೀಲರು ವಾದ ಮಂಡಿಸಿದ್ದರು.