
ಎ ಅಥವಾ ಬಿ ಖಾತಾದಲ್ಲಿ ಗೊಂದಲ ಬೇಡ: ಯಾವುದೇ ಖಾತೆ ಇದ್ದರೂ ನೋಂದಣಿ ಮಾಡಬಹುದು!
ಎ ಅಥವಾ ಬಿ ಖಾತಾದಲ್ಲಿ ಗೊಂದಲ ಬೇಡ: ಯಾವುದೇ ಖಾತೆ ಇದ್ದರೂ ನೋಂದಣಿ ಮಾಡಬಹುದು!
ಸ್ಥಳೀಯ ಸಂಸ್ಥೆಗಳಲ್ಲಿ ಇದೀಗ ಖಾತಾ ನೋಂದಣಿ ಅಭಿಯಾನ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ, ಎ ಅಥವಾ ಬಿ ಖಾತಾದಲ್ಲಿ ಗೊಂದಲ ಉಂಟಾಗಿದೆ.
ಈ ಬಗ್ಗೆ ಮುದ್ರಾಂಕ ಆಯುಕ್ತ ದಯಾನಂದ್ ಅವರು ಸ್ಪಷ್ಟೀಕರಣ ನೀಡಿದ್ದು, ಎ ಅಥವಾ ಬಿ ಖಾತಾದಲ್ಲಿ ಯಾವುದೇ ಗೊಂದಲ ಬೇಡ. ಯಾವುದೇ ಖಾತೆ ಇದ್ದರೂ ನೋಂದಣಿ ಮಾಡಬಹುದು ಎಂದು ಹೇಳಿದ್ದಾರೆ.
ಇ-ಸ್ವತ್ತು, ಇ-ಆಸ್ತಿಯ ಇ-ತಂತ್ರಾಂಶದಿಂದ ಮಾಹಿತಿ ಪಡೆದು ಎ ಖಾತಾ, ಬಿ ಖಾತಾ ಯಾವುದೇ ಇದ್ದರೂ ನೋಂದಣಿ ಪ್ರಕ್ರಿಯೆ ನಡೆಸಬೇಕು ಎಂದು ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸುತ್ತೋಲೆ ಹೊರಡಿಸಿದ್ದಾರೆ.
ಎ ಖಾತಾ ಅಥವಾ ಬಿ ಖಾತಾ ಇದ್ದರೂ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಕೆಲವು ಉಪ ನೋಂದಣಾಧಿಕಾರಿಗಳು ಗೊಂದಲ ಸೃಷ್ಟಿಸುತ್ತಿದ್ದರು. ಇದಕ್ಕೆ ತೆರೆ ಹಾಕಿದ ದಯಾನಂದ್ ಅವರು, ಇ-ಸ್ವತ್ತು, ಇ-ಆಸ್ತಿಯ ಇ-ತಂತ್ರಾಂಶದಲ್ಲಿ ನೋಂದಣಿ ಆಗಿದ್ದರೆ ಅಂತಹ ಆಸ್ತಿಯನ್ನು ನೋಂದಣಿ ಮಾಡಬೇಕು ಎಂದು ಅವರು ಸೂಚನೆ ನೀಡಿದ್ದಾರೆ.
ಕೆಲವು ಉಪ ನೋಂದಣಾದಿಕಾರಿಗಳು ಸುತ್ತೋಲೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಗೊಂದಲ ಸೃಷ್ಟಿಸಿದ್ದಾರೆ. ಅವರಿಗೆ ಕೇಂದ್ರ ಕಚೇರಿಯಿಂದ ತರಬೇತಿ ನೀಡಲಾಗಿದೆ. ಇನ್ನು ಮುಂದೆ ಇಂತಹ ಗೊಂದಲ, ಮಾಹಿತಿಯ ಕೊರತೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಈ ಹಿಂದಿನ ಸರ್ಕಾರದ ಸುತ್ತೋಲೆ ಹಾಗೂ ಪತ್ರಗಳಲ್ಲಿ ಇರುವ ನಿರ್ದೇಶನವನ್ನು ಉಲ್ಲಂಘಿಸಿ ನೋಂದಣಿ ಮಾಡಲು ಅವಕಾಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಸುತ್ತೋಲೆ ಮತ್ತು ಕೇಂದ್ರ ಕಚೇರಿಯ ನಿರ್ದೇಶನ ಉಲ್ಲಂಘಿಸಿ ಸ್ಥಿರಾಸ್ತಿಯನ್ನು ನೋಂದಣಿ ಮಾಡುವ ಉಪ ವಿಭಾಗಾಧಿಕಾರಿಗಳ ವಿರುದ್ಧ ಕೆಸಿಎಸ್‌ಆರ್ ನಿಯಮಗಳಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.