.jpg)
ಸ್ತನ ಹಿಡಿದರೆ ಅತ್ಯಾಚಾರವಲ್ಲ!- ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ- ತೀರ್ಪಿಗೆ ತಡೆ
ಸ್ತನ ಹಿಡಿದರೆ ಅತ್ಯಾಚಾರವಲ್ಲ!- ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ- ತೀರ್ಪಿಗೆ ತಡೆ
ಸ್ತನ ಹಿಡಿದರೆ ಅತ್ಯಾಚಾರವಲ್ಲ, ಕೆಳ ವಸ್ತ್ರದ ಲಾಡಿ ಎಳೆದರೆ ಅತ್ಯಾಚಾರ ಯತ್ನವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಗಿದೆ. ಸ್ವಯಂ ಪ್ರೇರಿತವಾಗಿ ಈ ತೀರ್ಪಿನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ ಈ ಆದೇಶಕ್ಕೆ ತಡೆ ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಇದೊಂದು ಸಂವೇಹನಾಶೀಲ ರಹಿತ ಹಾಗೂ ಅಮಾನವೀಯ ಹಾಗೂ ಸೂಕ್ಷ್ಮತೆ ಕಳೆದುಕೊಂಡಿರುವ ತೀರ್ಪು ಎಂದು ಕಠಿಣ ಶಬ್ದಗಳಲ್ಲಿ ಬಣ್ಣಿಸಿದೆ.
ಪೋಕ್ಸೋ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡಿದ ತೀರ್ಪಿಗೆ ಸಾಮಾನ್ಯವಾಗಿ ತಡೆ ನೀಡುವುದಿಲ್ಲ. ಆದರೆ, ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳು ಅತ್ಯಾಚಾರ ಯತ್ನದ ಕುರಿತು ನೀಡಿರುವ ಅಭಿಪ್ರಾಯ ಮತ್ತು ವಿವರಣೆಗಳು ಆಘಾತಕಾರಿಯಾಗಿದೆ ಮತ್ತು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿವೆ. ಇದೊಂದು ಅಮಾನವೀಯ ತೀರ್ಪು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಬಣ್ಣಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ತೀರ್ಪಿನ ಪ್ಯಾರಾ 21, 24 ಹಾಗೂ 36 ರಲ್ಲಿ ಮಾಡಲಾಗಿರುವ ಉಲ್ಲೇಖಗಳು ಅತ್ಯಂತ ಹೀನವಾಗಿದೆ. ಕೆಟ್ಟ ಅಭಿಪ್ರಾಯವಾಗಿದ್ದು, ಮಾನವೀಯತೆ ಮತ್ತು ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿವೆ ಎಂದು ನ್ಯಾಯಪೀಠ ವಿಶ್ಲೇಷಿಸಿದೆ.
ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ತಡೆ ನೀಡಿದ ಸುಪ್ರೀಂ ಕೋರ್ಟ್, ದೇಶದ ಯಾವುದೇ ನ್ಯಾಯಾಲಯಗಳು ಪೋಕ್ಸೊ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ನೀಡಿದ ಅಭಿಪ್ರಾಯವನ್ನು ಯಾವುದೇ ಸಂದರ್ಭದಲ್ಲೂ ಪರಿಗಣಿಸಬಾರದು ಎಂದು ತಾಕೀತು ಮಾಡಿದೆ. ಸ್ವಂತ ವಿವೇಚನೆ ಮತ್ತು ಸಂವೇದನಾಶೀಲತೆಯಿಂದ ವಿಚಾರಣೆ ನಡೆಸಬೇಕು ಎಂದು ಸೂಚನೆ ನೀಡಿದೆ.
ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ನಾರಾಯಣ ಮಿಶ್ರಾ ತಮ್ಮ ತೀರ್ಪಿನಲ್ಲಿ ಅತ್ಯಾಚಾರ ಯತ್ನದ ಬಗ್ಗೆ ವಿವಾದಾತ್ಮಕ ವಿವರಣೆ ನೀಡಿದ್ದರು. ಈ ತೀರ್ಪು ಹಾಗೂ ಸುಪ್ರೀಂಕೋರ್ಟ್‌ನ ಸ್ವಯಂ ಪ್ರೇರಿತ ವಿಚಾರಣೆಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಪೀಠ ನೋಟೀಸ್ ಜಾರಿಗೊಳಿಸಿದೆ.