
ಎಐಬಿಇ ಪರೀಕ್ಷೆ ಪಾಸ್ ಆಗದೆ ಕರಿ ಕೋಟು ಧರಿಸುವಂತಿಲ್ಲ: ರಾಜ್ಯ ವಕೀಲರ ಪರಿಷತ್ ಎಚ್ಚರಿಕೆ
ಎಐಬಿಇ ಪರೀಕ್ಷೆ ಪಾಸ್ ಆಗದೆ ಕರಿ ಕೋಟು ಧರಿಸುವಂತಿಲ್ಲ: ರಾಜ್ಯ ವಕೀಲರ ಪರಿಷತ್ ಎಚ್ಚರಿಕೆ
ವಕೀಲರಾಗಿ ನೋಂದಣಿಯಾಗಿರುವ ಕಾನೂನು ಪದವೀಧರರು ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಪಾಸ್ ಆಗದೆ ಕರಿ ಕೋಟು ಧರಿಸುವಂತಿಲ್ಲ ಎಂದು ರಾಜ್ಯ ವಕೀಲರ ಪರಿಷತ್ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಕೆಲವು ಯುವ ಕಾನೂನು ಪದವೀಧರರು ಎಐಬಿಇ ಪರೀಕ್ಷೆ ಬರೆದು ಪಾಸ್ ಆಗುವುದಕ್ಕೆ ಮುಂಚೆಯೇ ಕರಿ ಕೋಟು ಧರಿಸಿ ವಕಾಲತ್ತಿಗೆ ಸಹಿ ಮಾಡಿ ನಿಯಮಬಾಹಿರವಾಗಿ ವಕೀಲಿಕೆ ನಡೆಸುತ್ತಿರುವುದು ಪರಿಷತ್ ಗಮನಕ್ಕೆ ಬಂದಿದೆ ಎಂದು ಕೆಎಸ್‌ಬಿಸಿ ಹೇಳಿದೆ.
ಪರೀಕ್ಷೆ ಪಾಸ್ ಆಗದವರು ಕೋರ್ಟ್ ಕಲಾಪದಲ್ಲಿ ವಕೀಲರ ಉಡುಪು (ಕರಿಕೋಟು) ಧರಿಸುವಂತಿಲ್ಲ. ವಕಾಲತ್‌ಗೆ ಸಹಿ ಹಾಕುವಂತಿಲ್ಲ ಎಂದು ಕೆಎಸ್‌ಬಿಸಿ ತಾಕೀತು ಮಾಡಿದೆ.
ಎಐಬಿಇ ಪರೀಕ್ಷೆ ಪಾಸ್ ಆಗದವರು ಅಥವಾ ವೃತ್ತಿ ಪ್ರಮಾಣ ಪತ್ರ ಯಾ ಸರ್ಟಿಫಿಕೇಟ್ ಆಫ್ ಪ್ರ್ಯಾಕ್ಟೀಸಿಂಗ್ ಪ್ರಮಾಣವನ್ನು ಹೊಂದಿರದ ವಕೀಲರಿಗೆ ಜಿಲ್ಲಾ ಯಾ ತಾಲೂಕು ವಕೀಲರ ಸಂಘಗಳು ಸದಸ್ಯತ್ವ ನೀಡಬೇಕು. ಆದರೆ, ಅವರಿಗೆ ಯಾವುದೇ ಮತದಾನದ ಹಕ್ಕು ಇರುವುದಿಲ್ಲ ಎಂದು ಕೆಎಸ್‌ಬಿಸಿ ಹೇಳಿದೆ.
ಈ ನಿಯಮ ಉಲ್ಲಂಘಿಸಿದ ಅಂತಹ ವಕೀಲರ ವಿರುದ್ಧ ವಕೀಲರ ಕಾಯ್ದೆ ಮತ್ತು ಸಿಒಪಿ ನಿಯಮಗಳ ಪ್ರಕಾರ ಅಮಾನತು ಮಾಡಲಾಗುವುದು ಎಂದು ಪರಿಷತ್ ಎಚ್ಚರಿಸಿದೆ.