
ಅನ್ಯರ ಜೊತೆ ಅಶ್ಲೀಲ ಚಾಟಿಂಗ್: ಪತ್ನಿಯ ಕೃತ್ಯ ಮಾನಸಿಕ ಕ್ರೌರ್ಯ ಎಂದ ಹೈಕೋರ್ಟ್- ವಿಚ್ಚೇದನಕ್ಕೆ ಅನುಮತಿ
ಅನ್ಯರ ಜೊತೆ ಅಶ್ಲೀಲ ಚಾಟಿಂಗ್: ಪತ್ನಿಯ ಕೃತ್ಯ ಮಾನಸಿಕ ಕ್ರೌರ್ಯ ಎಂದ ಹೈಕೋರ್ಟ್- ವಿಚ್ಚೇದನಕ್ಕೆ ಅನುಮತಿ
ಪರ ಪುರುಷನ ಜೊತೆಗೆ ಪತ್ನಿಯು ಅಶ್ಲೀಲ ಚಾಟ್ (ಸಂದೇಶ ಮಾತುಕತೆ) ನಡೆಸುವುದು, ಆಕ್ಷೇಪಣೆಯ ಹೊರತಾಗಿಯೂ ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿಸಿದರೆ ಅದು ಮಾನಸಿಕ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿಯ ಕೃತ್ಯವನ್ನು ಪರಿಗಣಿಸಿ ಪತಿಗೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಹೈಕೋರ್ಟ್‌ನ ವಿವೇಕ್ ರಸಿಯಾ ಮತ್ತು ಗಜೇಂದ್ರ ಸಿಂಗ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಪತ್ನಿಯು ಪರ ಪುರುಷ ಸ್ನೇಹಿತನ ಜೊತೆಗೆ ತನ್ನ ಲೈಂಗಿಕ ಜೀವನದ ಬಗ್ಗೆ ಚಾಟ್ ಮಾಡುತ್ತಿದ್ದಳು ಎಂಬ ಆರೋಪವನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.
ಮದುವೆಯ ನಂತರ ಪತ್ನಿ ಅಥವಾ ಪತಿ ತಮ್ಮ ಸ್ನೇಹಿತರೊಂದಿಗೆ ಅಗೌರವದ ಅಥವಾ ಅಶ್ಲೀಲ ಸಂಭಾಷಣೆ ನಡೆಸುವುದು ಕ್ರೌರ್ಯ ಎಂದು ಹೇಳಿತು.
ಯಾವುದೇ ಪತಿ ತನ್ನ ಪತ್ನಿಯು ಮೊಬೈಲ್ ಮೂಲಕ ಈ ರೀತಿಯ ಅಶ್ಲೀಲ ಸಂದೇಶ ಸಂವಾದದಲ್ಲಿ ತೊಡಗುವುದನ್ನು ಸಹಿಸುವುದಿಲ್ಲ. ಮದುವೆಯ ನಂತರ ಪತಿ ಮತ್ತು ಪತ್ನಿ ಇಬ್ಬರೂ ಸ್ನೇಹಿತರೊಂದಿಗೆ ಮೊಬೈಲ್, ಚಾಟಿಂಗ್ ಮತ್ತು ಇತರ ವಿಧಾನದ ಮೂಲಕ ಸಂಭಾಷಣೆ ನಡೆಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದರೆ, ಚಾಟಿಂಗ್ ಸಭ್ಯತೆ ಮತ್ತು ಘನತೆಯಿಂದ ಕೂಡಿರಬೇಕು ಎಂದು ನ್ಯಾಯಪೀಠ ಹೇಳಿದೆ.
ಅದರಲ್ಲೂ ವಿಶೇಷವಾಗಿ ವಿರುದ್ಧ ಲಿಂಗೀಯ ಸ್ನೇಹಿತರೊಂದಿಗೆ ಮಾತನಾಡುವಾಗ ಅಥವಾ ಚಾಟಿಂಗ್ ನಡೆಸುವಾಗ ಅದು ಜೀವನ ಸಂಗಾತಿಗೆ ಅಕ್ಷೇಪಾರ್ಹವೆನಿಸದ ರೀತಿಯಲ್ಲಿ ಇರಬೇಕು. ಆಕ್ಷೇಪಣೆಯ ಹೊರತಾಗಿಯೂ ಪತಿ ಅಥವಾ ಪತ್ನಿ ಅಂತಹ ಚಟುವಟಿಕೆಯನ್ನು ಮುಂದುವರಿಸಿಸಿದರೆ ಅದು ಮಾನಸಿಕ ಕ್ರೌರ್ಯ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.