
ಓದಿದ್ದು 10ನೇ ಕ್ಲಾಸ್, ಕ್ಲಿನಿಕ್‌ಗೆ ಅನುಮತಿ ಕೋರಿದ ನಕಲಿ ಡಾಕ್ಟರ್: ಫೇಕ್ ಡಾಕ್ಟರ್‌ಗಳ ವಿರುದ್ಧ ಅಭಿಯಾನಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ
ಓದಿದ್ದು 10ನೇ ಕ್ಲಾಸ್, ಕ್ಲಿನಿಕ್‌ಗೆ ಅನುಮತಿ ಕೋರಿದ ನಕಲಿ ಡಾಕ್ಟರ್: ಫೇಕ್ ಡಾಕ್ಟರ್‌ಗಳ ವಿರುದ್ಧ ಅಭಿಯಾನಕ್ಕೆ ಕರ್ನಾಟಕ ಹೈಕೋರ್ಟ್ ಸೂಚನೆ
ತಾನು 10ನೇ ಕ್ಲಾಸ್ ಮಾತ್ರ ಓದಿದ್ದು ಎಂದು ಒಪ್ಪಿಕೊಂಡಿದ್ದರೂ ತನಗೆ ಕ್ಲಿನಿಕ್ ತೆರೆಯಲು ಅವಕಾಶ ನೀಡಬೇಕು ಎಂದು ನಕಲಿ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಅಲ್ಲದೆ, ಜನರ ಜೀವದ ಜೊತೆಗೆ ಚೆಲ್ಲಾಟವಾಡುವ ಇಂತಹ ನಕಲಿ ವೈದ್ಯರ ವಿರುದ್ಧ ರಾಜ್ಯವ್ಯಾಪಿ ಅಭಿಯಾನ ನಡೆಸುವಂತೆ ಸೂಚನೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
10ನೇ ಕ್ಲಾಸ್ ಪಾಸ್ ಆಗಿದ್ದ ಕೆ.ಆರ್. ಪೇಟೆಯ ಎ.ಎ. ಮುರಳೀಧರ ಸ್ವಾಮಿ, ತಾನು ನಡೆಸುತ್ತಿರುವ ಲಕ್ಷ್ಮಿ ಕ್ಲಿನಿಕ್‌ನ್ನು ಕರ್ನಾಟಕ ವೈದ್ಯಕೀಯ ಖಾಸಗಿ ಕಂಪೆನಿಗಳ ಕಾಯ್ದೆಯಡಿ ನೋಂದಣಿ ಮಾಡಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರು ತಮ್ಮನ್ನು ವೈದ್ಯ ಎಂದು ಸಂಬೋಧಿಸಿಕೊಂಡಿದ್ದಾರೆ. ಆದರೆ, ಈತ ತಾನೊಬ್ಬ ವೈದ್ಯ ಎಂಬುದಕ್ಕೆ ಯಾವುದೇ ದಾಖಲೆಯನ್ನು ಹಾಜರುಪಡಿಸಿಲ್ಲ. ಮೇಲಾಗಿ, ಈತನನ್ನು ಪ್ರತಿನಿಧಿಸಿದ ವಕೀಲರೇ, ಅರ್ಜಿದಾರರು 10ನೇ ಕ್ಲಾಸ್ ಪಾಸ್ ಆಗಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂಬುದನ್ನು ಹೈಕೋರ್ಟ್ ಪೀಠ ಗಮನಿಸಿತು.
ವೈದ್ಯಕೀಯದ ಯಾವುದೇ ವಿಭಾಗದಲ್ಲೂ ಅಧ್ಯಯನ ಮಾಡಿರುವ, ವೈದ್ಯರ ಅರ್ಹತೆ ಪ್ರತಿಬಿಂಬಿಸುವ ಯಾವುದೇ ಪ್ರಮಾಣಪತ್ರವನ್ನು ಸಲ್ಲಿಸಲು ಅವರು ವಿಫಲರಾಗಿದ್ದಾರೆ ಎಂದು ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿದ್ದು, ಅರ್ಜಿದಾರರು ಯಾವುದೇ ಪರಿಹಾರಕ್ಕೆ ಯೋಗ್ಯರಲ್ಲ ಎಂದು ಘೋಷಿಸಿದೆ.
ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ವಿಪರೀತವಾಗಿದ್ದು, ಆರ್‌ಎಂಪಿ ವೈದ್ಯರ ಹೆಸರಿನಲ್ಲಿ ಅನೇಕ ನಕಲಿ ಡಾಕ್ಟರ್‌ಗಳು ಇದ್ದಾರೆ. ಅಂತಹ ಕೋರ್ಸ್ ರದ್ದುಪಡಿಸಿದ್ದರೂ, ನೈಜ ವೈದ್ಯರಿಗೆ ಸಡ್ಡು ಹೊಡೆಯುವಂತೆ ನಕಲಿ ವೈದ್ಯರು ಸೃಷ್ಟಿಯಾಗಿದ್ಧಾರೆ ಎಂದು ಹೈಕೋರ್ಟ್ ಗರಂ ಆಗಿದೆ.
ತಮ್ಮನ್ನು ತಾವು ವೈದ್ಯರೆಂದೇ ಬಿಂಬಿಸಿಕೊಳ್ಳುವ ವ್ಯಕ್ತಿಗಳೇ ಕ್ಲಿನಿಕ್‌ಗಳನ್ನು ತೆರೆಯುತ್ತಿದ್ದಾರೆ. ಅಂತಹ ಕ್ಲಿನಿಕ್‌ಗಳಿಂದಾಗಿ ರಾಜ್ಯದ ಜನರು ಅಪಾಯದಲ್ಲಿ ಇದ್ದಾರೆ. ಇಂತಹ ಚಿಕಿತ್ಸಾಲಯಗಳನ್ನು ಪತ್ತೆ ಹಚ್ಚಿ ತಕ್ಷಣ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ಈ ಆದೇಶದ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಕಳುಹಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿದ್ದು, ಮುಂದಿನ ಕಲಾಪದಲ್ಲಿ ಕ್ರಮ ಕೈಗೊಂಡ ವರದಿಯನ್ನು ನ್ಯಾಯಪೀಠದ ಮುಂದೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಿದೆ.