
ಉದ್ಯಮಿಯಿಂದ ವಂಚನೆ: ನಟಿ ಸಂಜನಾ ಗಲ್‌ರಾನಿ ಪರ ತೀರ್ಪು ನೀಡಿದ ಕೋರ್ಟ್- 61.40 ಲಕ್ಷ ವಾಪಸ್ ನೀಡಲು ಆದೇಶ
ಉದ್ಯಮಿಯಿಂದ ವಂಚನೆ: ನಟಿ ಸಂಜನಾ ಗಲ್‌ರಾನಿ ಪರ ತೀರ್ಪು ನೀಡಿದ ಕೋರ್ಟ್- 61.40 ಲಕ್ಷ ವಾಪಸ್ ನೀಡಲು ಆದೇಶ
ನಟಿ ಸಂಜನಾ ಗಲ್ರಾನಿ ಆಲಿಯಾಸ್ ಅರ್ಚನಾ ಗಲ್‌ರಾನಿ ಅವರಿಂದ ಹಣ ಪಡೆದು ವಂಚಿಸಿದ ಉದ್ಯಮಿ ರಾಹುಲ್ ತೋನ್ಸೆ ವಿರುದ್ಧ ಪ್ರಕರಣ ದೃಢಪಟ್ಟಿದ್ದು, ಸಂಜನಾ ಪರ ಬೆಂಗಳೂರಿನ ಮೂರನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿದೆ.
ನಟಿ ಸಂಜನಾ ಗಲ್‌ರಾನಿಗೆ 61.40 ಲಕ್ಷ ವಾಪಸ್ ನೀಡಲು ವಿಫಲರಾದರೆ ಅಪರಾಧಿ ರಾಹುಲ್ ತೋನ್ಸೆ ಆರು ತಿಂಗಳ ಸಾದಾ ಜೈಲು ಶಿಕ್ಷೆ ಪೂರೈಸಬೇಕು. ಒಂದು ವೇಳೆ ಪರಿಹಾರ ಮೊತ್ತ ನೀಡದೇ ಜೈಲು ಶಿಕ್ಷೆ ಅನುಭವಿಸಿದರೆ ಪರಿಹಾರ ಹಿಂತಿರುಗಿಸುವ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಪು ಹೇಳಿದೆ.
2018-19ರಲ್ಲಿ ರಿಯಲ್ ಎಸ್ಟೇಟ್ ಹೂಡಿಕೆಯ ನೆಪದಲ್ಲಿ ಸಂಜನಾ ತನ್ನ ಸ್ನೇಹಿತನೂ ಆಗಿದ್ದ ರಾಹುಲ್ ತೋನ್ಸೆಗೆ 45 ಲಕ್ಷ ರೂ.ಗಳನ್ನು ನೀಡಿದ್ದರು. ಈ ಹಣವನ್ನು ಪಡೆದಿದ್ದ ರಾಹುಲ್ ಹಣ ನೀಡದೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ 2021ರಲ್ಲಿ ನಟಿ ಸಂಜನಾ ಇಂದಿರಾನಗರದಲ್ಲಿ ಪ್ರಕರಣ ದಾಖಲಿಸಿದ್ದರು.
ಕೋರ್ಟ್ ಸೂಚನೆ ಮೇರೆಗೆ ರಾಹುಲ್ ತೋನ್ಸೆ ವಿರುದ್ಧ ನ್ಯಾಯಾಲಯದಲ್ಲಿ ವಂಚನೆ ಮತ್ತು ಚೆಕ್ ಅಮಾನ್ಯ ಪ್ರಕರಣವನ್ನೂ ದಾಖಲಿಸಿದ್ದರು. ಚೆಕ್ ಬೌನ್ಸ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯ ಸಂಜನಾ ಅವರಿಗೆ ಪಾವತಿ ಮಾಡಬೇಕಾದ ಹಣಕ್ಕೆ ಬಡ್ಡಿ ಸೇರಿಸಿ 61.40 ಲಕ್ಷ ವಾಪಸ್ ನೀಡಲು ಆದೇಶ ನೀಡಿದೆ.
ಅಪರಾಧಿ ರಾಹುಲ್ ತೋನ್ಸೆ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ. ಆತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಈತನ ವಿರುದ್ಧ ಐದು ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಪೊಲೀಸರು ಆತನನ್ನು ಬಂಧಿಸಿದ್ದರು.
ಆರೋಪ ಉದ್ಯಮಿಯಿಂದ ವಂಚನೆ: ಸಂಜನಾ ಪರ ತೀರ್ಪು ನೀಡಿದ ಕೋರ್ಟ್- 61.40 ಲಕ್ಷ ವಾಪಸ್ ನೀಡಲು ಆದೇಶ