
ಆರೋಗ್ಯ ಸಂಜೀವಿನಿ ಯೋಜನೆ ಉಚಿತವಲ್ಲ- ಮಾಸಿಕ ಕಂತು ಪಾವತಿ ಆಧಾರಿತ ಆರೋಗ್ಯ ವಿಮಾ ಯೋಜನೆ ಬಗ್ಗೆ ಒಂದು ಮಾಹಿತಿ
ಆರೋಗ್ಯ ಸಂಜೀವಿನಿ ಯೋಜನೆ ಉಚಿತವಲ್ಲ- ಮಾಸಿಕ ಕಂತು ಪಾವತಿ ಆಧಾರಿತ ಆರೋಗ್ಯ ವಿಮಾ ಯೋಜನೆ ಬಗ್ಗೆ ಒಂದು ಮಾಹಿತಿ
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಉಚಿತವಲ್ಲ. ಮಾಸಿಕ ಕಂತು ಪಾವತಿ ಆಧಾರಿತ ಆರೋಗ್ಯ ವಿಮಾ ಯೋಜನೆಯಾಗಿದೆ
ರಾಷ್ಟ್ರೀಯ ನಾಗರಿಕ ಸೇವಾ ದಿನಾಚರಣೆಯ ದಿನವಾದ 21.4.2025 ರಂದು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯ ನೋಂದಣಿಗೆ ಚಾಲನೆ ನೀಡಿದರು.
ಇದು ರಾಜ್ಯದ ಸರಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ಉಚಿತ ನಗದು ರಹಿತ ಚಿಕಿತ್ಸಾ ಯೋಜನೆಯಾಗಿದೆ ಎಂಬುದಾಗಿ ವ್ಯಾಪಕ ಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯ ವಾಸ್ತವ ಅಂಶಗಳ ಕುರಿತು ರಾಜ್ಯದ ಸರಕಾರಿ ನೌಕರರಿಗೆ ಮಾಹಿತಿ ನೀಡುವುದು ಈ ಲೇಖನದ ಉದ್ದೇಶವಾಗಿದೆ.
ಈ ಯೋಜನೆಯು ಉಚಿತ ಯೋಜನೆಯಲ್ಲ. ಇದು ಮಾಸಿಕ ಕಂತು ಪಾವತಿ ಆಧಾರಿತ ಆರೋಗ್ಯ ವಿಮಾ ಯೋಜನೆಯಾಗಿದೆ. ಈ ಯೋಜನೆಯ ಲಾಭ ಪಡೆಯಲು ನೌಕರರು ಈ ಕೆಳಕಂಡಂತೆ ಮಾಸಿಕ ವಂತಿಗೆಯನ್ನು ನೀಡಬೇಕಾಗುತ್ತದೆ.
ಗ್ರೂಪ್ ಎ- 1000, ಗ್ರೂಪ್ ಬಿ- 500, ಗ್ರೂಪ್ ಸಿ- 350, ಗ್ರೂಪ್ ಡಿ- 250.
ಈ ಯೋಜನೆಗೆ ನೋಂದಣಿ ಮಾಡಿದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರರಿಗೆ ಇದುವರೆಗೂ ತಮ್ಮ ಮಾಸಿಕ ವೇತನದ ಜೊತೆಗೆ ಸಿಗುತ್ತಿದ್ದ ವೈದ್ಯಕೀಯ ಭತ್ಯೆ ರೂಪಾಯಿ 500 ನಿಲುಗಡೆಯಾಗುತ್ತದೆ.
ಹಾಗಾಗಿ ಈ ಯೋಜನೆಗೆ ಸೇರಿದ ಡಿ ಗ್ರೂಪ್ ನೌಕರರು ವಾರ್ಷಿಕ ರೂಪಾಯಿ 9,000, ಸಿ ಗ್ರೂಪ್ ನೌಕರರು ವಾರ್ಷಿಕ ರೂಪಾಯಿ 10,200 ಆರೋಗ್ಯ ವಿಮಾ ಬಾಬ್ತು ಕಂತನ್ನು ಪಾವತಿಸಬೇಕಾಗುತ್ತದೆ. ಎ ಮತ್ತು ಬಿ ಗ್ರೂಪ್ ನೌಕರರಿಗೆ ಮಾಸಿಕ ವೇತನದ ಜೊತೆಗೆ ವೈದ್ಯಕೀಯ ಬತ್ತ್ಯೆ ಲಭ್ಯವಿಲ್ಲದೆ ಇರುವುದರಿಂದ ಅವರು ಅನುಕ್ರಮವಾಗಿ ವಾರ್ಷಿಕ ರೂಪಾಯಿ 12,000 ಮತ್ತು 6,000 ಗಳನ್ನು ಆರೋಗ್ಯ ವಿಮಾ ಕಂತುಗಳ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಆರೋಗ್ಯ ಸಂಜೀವಿನಿ ಯೋಜನೆಗೆ ಸೇರಿದ ನೌಕರರ ಮೇ 2025 ನೇ ತಿಂಗಳ ಸಂಬಳದಲ್ಲಿ ಆರೋಗ್ಯ ವಿಮಾ ಕಂತು ಕಟಾವಣೆಗೊಳ್ಳುತ್ತವೆ.
ಈ ಯೋಜನೆಗೆ ಸೇರುವುದು ಸರಕಾರಿ ನೌಕರರಿಗೆ ಕಡ್ಡಾಯವಲ್ಲ, ಐಚ್ಛಿಕವಾಗಿದೆ. ಈ ಯೋಜನೆ ತಮಗೆ ಉಪಯುಕ್ತ ವೆಂದಾದಲ್ಲಿ ಯೋಜನೆಗೆ ಸೇರಲು ಇರುವ ಆಯ್ಕೆಯ ಅವಕಾಶವನ್ನು ನಿಗದಿತ ಅರ್ಜಿ ನಮೂನೆ 1 ನ್ನು ಭರ್ತಿ ಮಾಡುವ ಮೂಲಕ ಬಳಸಿಕೊಳ್ಳಬಹುದು. ಇಚ್ಛೆ ಇಲ್ಲದ ಪಕ್ಷದಲ್ಲಿ ನಿಗದಿಪಡಿಸಿದ್ದ ನಮೂನೆ
2 ನ್ನು ಭರ್ತಿ ಮಾಡುವ ಮೂಲಕ ತಮ್ಮ ಆಯ್ಕೆಯನ್ನು ವೇತನ ಬಟವಾಡೆ ಅಧಿಕಾರಿಗಳಿಗೆ ತಿಳಿಸಬಹುದಾಗಿದೆ. ಆಯ್ಕೆಯನ್ನು ವ್ಯಕ್ತಪಡಿಸುವ ಅಂತಿಮ ದಿನಾಂಕ 20.5.2025 ಆಗಿರುತ್ತದೆ.
ಆಯ್ಕೆಯನ್ನು ಲಿಖಿತ ರೂಪದಲ್ಲಿ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡಲು ಇಚ್ಚಿಸಿದ್ದಾರೆಂದು ಪರಿಗಣಿಸಿ ಅವರ ಮೇ 2025 ನೇ ತಿಂಗಳ ವೇತನದಿಂದ ಎಚ್. ಆರ್. ಎಂ. ಎಸ್. ಮುಖಾಂತರ ವಂತಿಗೆ ಕಟಾವಣೆ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ಚಿಕಿತ್ಸಾ ವೆಚ್ಚದ ಗರಿಷ್ಠ ಮಿತಿಯ ಬಗ್ಗೆ ಸ್ಪಷ್ಟನೆ ಇಲ್ಲ. ರೂಪಾಯಿ 1,50,000/- (ಒಂದುವರೆ ಲಕ್ಷ ರೂಪಾಯಿ) ವರೆಗಿನ ವಾರ್ಷಿಕ ಚಿಕಿತ್ಸಾ ವೆಚ್ಚವನ್ನು ಸರಕಾರವು ಪಾವತಿಸುವುದು. ಹೆಚ್ಚುವರಿ ಚಿಕಿತ್ಸಾ ವೆಚ್ಚವನ್ನು ನೌಕರರು ಪಾವತಿಸಬೇಕೆ ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.
ಸ್ವರೂಪಿಕ ಚಿಕಿತ್ಸೆಗೆ ಈ ಯೋಜನೆಯಲ್ಲಿ ಅವಕಾಶವಿಲ್ಲ. ನ್ಯಾಯಾಂಗ ಅಧಿಕಾರಿಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
ಈ ಯೋಜನೆಯಡಿ ಕುಟುಂಬ ಎಂಬ ಪರಿಭಾಷೆಯೊಳಗೆ ಸಂಗಾತಿ, ಮಕ್ಕಳು, ತಂದೆ, ತಾಯಿ ಒಳಗೊಂಡಿರುತ್ತಾರೆ. ಹೆತ್ತವರ ಮಾಸಿಕ ಆದಾಯ 17,000/- ಮೀರಿದ್ದಲ್ಲಿ ಈ ಯೋಜನೆಯ ಫಲಾನುಭವಿಯಾಗಲು ಅವಕಾಶವಿಲ್ಲ. ಸಂಪಾದನೆಯುಳ್ಳ ಮಕ್ಕಳು ಈ ಯೋಜನೆಯ ಲಾಭ ಪಡೆಯಲು ಅವಕಾಶ ಇಲ್ಲ. ಸಂಪಾದನೆ ಇಲ್ಲದ ಮಕ್ಕಳು 30 ವರ್ಷಗಳ ವರೆಗೆ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ಈ ಯೋಜನೆಯು ನೌಕರರಿಗೆ ಉಪಯುಕ್ತವೇ, ಅಲ್ಲವೇ ಎಂಬುದನ್ನು ಯೋಜನೆ ಅನುಷ್ಠಾನಗೊಂಡ ಬಳಿಕ ಸಾಧಕ ಬಾದಕಗಳ ಅನುಭವದಿಂದ ಮಾತ್ರ ಹೇಳಲು ಸಾಧ್ಯ. ಈ ಯೋಜನೆಗೆ ಸೇರಲು ಇಚ್ಛಿಸದ ನೌಕರರಿಗೆ ಈಗ ಅಸ್ತಿತ್ವದಲ್ಲಿರುವ ವೈದ್ಯಕೀಯ ವೆಚ್ಚ ಮರುಪಾವತಿ ನಿಯಮಗಳು ಅನ್ವಯವಾಗುತ್ತದೆ.