-->
ಆರ್‌ಟಿಐ ಕಾಯ್ದೆ: ವಿಳಂಬ ಮಾಹಿತಿಗೆ ಶಿಕ್ಷೆ: ತಹಶೀಲ್ದಾರ್‌ಗೆ 25  ಸಾವಿರ ರೂ. ದಂಡ

ಆರ್‌ಟಿಐ ಕಾಯ್ದೆ: ವಿಳಂಬ ಮಾಹಿತಿಗೆ ಶಿಕ್ಷೆ: ತಹಶೀಲ್ದಾರ್‌ಗೆ 25 ಸಾವಿರ ರೂ. ದಂಡ

ಆರ್‌ಟಿಐ ಕಾಯ್ದೆ: ವಿಳಂಬ ಮಾಹಿತಿಗೆ ಶಿಕ್ಷೆ: ತಹಶೀಲ್ದಾರ್‌ಗೆ 25  ಸಾವಿರ ರೂ. ದಂಡ


ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 30 ದಿನದೊಳಗಾಗಿ ಮಾಹಿತಿ ಒದಗಿಸದೆ 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿದ ತಹಶೀಲ್ದಾರ್‌ಗೆ 25  ಸಾವಿರ ರೂ. ದಂಡ ವಿಧಿಸಲಾಗಿದೆ. 

ಮಂಡ್ಯ ಜಿಲ್ಲೆಯ ಪಾಂಡವಪುರದ ತಹಶೀಲ್ದಾರ್ ಎಸ್. ಸಂತೋಷ್ ಅವರು ಈ ಶಿಕ್ಷೆಗೊಳಗಾದವರು.

ಈ ದಂಡದ ಮೊತ್ತವನ್ನು ಒಂದೇ ಕಂತಿನಲ್ಲಿ ತಹಶೀಲ್ದಾರ್ ಅವರ ಮುಂದಿನ ಸಂಬಳದಲ್ಲೇ ಕಡಿತ ಮಾಡಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಾಗುವುದು. ಜಮಾ ಮಾಡಿದ ರಶೀದಿಯೊಂದಿಗೆ ವರದಿ ಸಲ್ಲಿಸಲು ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ.

ಈ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ವಿಫಲವಾದರೆ, ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಆಯೋಗ ತನ್ನ ನಿರ್ದೇಶನದಲ್ಲಿ ಸ್ಪಷ್ಟಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ 240ಕ್ಕೂ ಹೆಚ್ಚು ದಿನ ವಿಳಂಬ ಮಾಡಿರುವ ಪ್ರಕರಣವನ್ನು ಮಾಹಿತಿ ಆಯೋಗ ಗಂಭೀರವಾಗಿ ಪರಿಗಣಿಸಿದೆ. 30 ದಿನದೊಳಗಾಗಿ ಮಾಹಿತಿ ಒದಗಿಸದೆ ಇರುವುದೇ ದೊಡ್ಡ ತಪ್ಪು. ಅದು ಬಿಟ್ಟು ಮತ್ತಷ್ಟು ವಿಳಂಬ ಮಾಡಿರುವುದು ಸಮರ್ಥನೀಯವಲ್ಲ ಎಂದು ಆಯೋಗ ಹೇಳಿದೆ.

ಅರ್ಜಿದಾರರಾದ ಎಲ್.ಎಂ. ಚಂದ್ರು ಅವರು ಅನುಭವಿಸುವ ಯಾತನೆ ಮತ್ತು ಮಾನಸಿಕ ನೋವು ಹಾಗೂ ಖರ್ಚಿಗೆ 10 ಸಾವಿರ ರೂ. ಪರಿಹಾರ ನೀಡುವಂತೆ ಆಯೋಗ ಆದೇಶ ನೀಡಿದೆ. ಈ ಪರಿಹಾರದ ಮೊತ್ತವನ್ನು 15 ದಿನದೊಳಗಾಗಿ ರಾಷ್ಟ್ರೀಕೃತ ಬ್ಯಾಂಕಿನಿಂದ ಕ್ರಾಸ್ ಮಾಡಿದ ಡಿಮ್ಯಾಂಡ್ ಡ್ರಾಫ್ಟ್‌ ಪಡೆದು ಮೇಲ್ಮನವಿದಾರರಿಗೆ ನೋಂದಾಯಿತ ಅಂಚೆ ಸ್ವೀಕೃತಿ ಮೂಲಕ ಕಳುಹಿಸಿಕೊಡಬೇಕು ಎಂದು ಆರೋಪಿ ತಹಶೀಲ್ದಾರ್ ಎಸ್. ಸಂತೋಷ್ ಅವರಿಗೆ ಸೂಚಿಸಿದೆ.

ಮೇಲ್ಮನವಿದಾರರಿಗೆ ಮಾಹಿತಿ ಒದಗಿಸಿರುವ ಬಗ್ಗೆ ಆಯೋಗಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸದೆ ಸತತವಾಗಿ ವಿಚಾರಣೆಗೆ ಗೈರು ಹಾಜರಾಗಿ ಪ್ರಕರಣದ ಶೀಘ್ರ ವಿಲೇವಾರಿಗೆ ಅಡ್ಡಿ ಪಡಿಸುತ್ತಿರುವುದಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಏಕೆ ಕ್ರಮಕ್ಕೆ ಶಿಫಾರಸ್ಸು ಮಾಡಬಾರದು ಎಂಬುದಕ್ಕೆ ಕಾರಣ ಕೇಳಿ ಲಿಖಿತ ಉತ್ತರವನ್ನು ಮುಂದಿನ ವಿಚಾರಣೆ ದಿನದಂದು ಸಲ್ಲಿಸಬೇಕು ಎಂದು ತಹಶೀಲ್ದಾರ್ ಸಂತೋಷ್ ಅವರಿಗೆ ಆಯೋಗ ನಿರ್ದೇಶನ ನೀಡಿದೆ.



Ads on article

Advertise in articles 1

advertising articles 2

Advertise under the article