
SGSP Account | ರಾಜ್ಯ ಸರಕಾರಿ ನೌಕರರಿಗೆ ಕಡ್ಡಾಯ ವೇತನ ಖಾತೆ - ಒಂದು ಉಪಯುಕ್ತ ಮಾಹಿತಿ
SGSP Account | ರಾಜ್ಯ ಸರಕಾರಿ ನೌಕರರಿಗೆ ಕಡ್ಡಾಯ ವೇತನ ಖಾತೆ - ಒಂದು ಉಪಯುಕ್ತ ಮಾಹಿತಿ
ಲೇಖನ: ಶ್ರೀ ಪ್ರಕಾಶ್ ನಾಯಕ್, ಮಂಗಳೂರು
ರಾಜ್ಯ ಸರಕಾರಿ ನೌಕರರಿಗೆ ವೇತನ ಖಾತೆ (SGSP ACCOUNT) ಯನ್ನು ರಾಜ್ಯದ ಬಹುತೇಕ ಬ್ಯಾಂಕ್ ಗಳು ದಶಕದ ಹಿಂದೆಯೇ ಪ್ರಾರಂಭಿಸಿದ್ದು ಪ್ರಸ್ತುತ ಶೇಕಡಾ 90 ರಷ್ಟು ನೌಕರರು ಈ ವೇತನ ಖಾತೆಯನ್ನು ಹೊಂದಿರುತ್ತಾರೆ.
2005 ರ ವರೆಗೆ ಕರ್ನಾಟಕ ರಾಜ್ಯದ ಸರಕಾರಿ ನೌಕರರು ತಮ್ಮ ಮಾಸಿಕ ವೇತನವನ್ನು ನಗದು ರೂಪದಲ್ಲಿ ಪಡೆಯುತ್ತಿದ್ದರು. ಮಾನವ ಸಂಪನ್ಮೂಲ ಆಡಳಿತ ಪದ್ಧತಿ (HRMS) ಅನುಷ್ಠಾನಕ್ಕೆ ಬಂದ ಬಳಿಕ ಸರಕಾರಿ ನೌಕರರ ಬ್ಯಾಂಕ್ ಖಾತೆಗೆ ನೇರವಾಗಿ ವೇತನವನ್ನು ಪಾವತಿಸುವ ವ್ಯವಸ್ಥೆ ಜಾರಿಗೆ ಬಂತು. ಅತ್ಯಧಿಕ ಸಂಖ್ಯೆಯಲ್ಲಿರುವ ಸರಕಾರಿ ನೌಕರರ ವೇತನ ಖಾತೆಯನ್ನು ತಮ್ಮ ಬ್ಯಾಂಕುಗಳಲ್ಲಿ ತೆರೆದು ಲಾಭ ಪಡೆಯಲು ವಿವಿಧ ಬ್ಯಾಂಕುಗಳ ನಡುವೆ ಪೈಪೋಟಿ ಪ್ರಾರಂಭವಾಯಿತು.
ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ 12 ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳ ಪೈಕಿ 32 ಬ್ಯಾಂಕುಗಳು ಸರಕಾರದ ಏಜೆನ್ಸಿ ಬ್ಯಾಂಕುಗಳೆಂದು ಭಾರತೀಯ ರಿಸರ್ವ್ ಬ್ಯಾಂಕಿನಿಂದ ಮಾನ್ಯತೆ ಪಡೆದಿವೆ. ಈ ಎಲ್ಲಾ ಬ್ಯಾಂಕುಗಳಲ್ಲಿ ವೇತನ ಖಾತೆಯನ್ನು ತೆರೆಯಲು ಸರಕಾರಿ ನೌಕರರಿಗೆ ಅವಕಾಶವಿದೆ. ಆದರೆ ಆಶ್ಚರ್ಯದ ಸಂಗತಿ ಏನೆಂದರೆ ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಸರಕಾರಿ ಏಜೆನ್ಸಿ ಬ್ಯಾಂಕ್ ಆಗಿದೆ ಎಂಬ ತಪ್ಪು ಕಲ್ಪನೆ ಬಹುತೇಕ ಸರಕಾರಿ ನೌಕರರಲ್ಲಿದೆ.
ಸರಕಾರದ ಏಜೆನ್ಸಿ ಬ್ಯಾಂಕುಗಳಾದ ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಇಟ್ಟ ಸರಕಾರಿ ಠೇವಣಿ ಹಣ ದುರುಪಯೋಗವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ರಾಜ್ಯ ಸರ್ಕಾರವು ಈ ಎರಡು ಬ್ಯಾಂಕುಗಳಲ್ಲಿ ಸರಕಾರಿ ಇಲಾಖೆಗಳು, ನಿಗಮ, ಮಂಡಳಿಗಳು ಯಾವುದೇ ವ್ಯವಹಾರ ಮಾಡದಂತೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು.
ಆ ಬಳಿಕ ಎರಡೂ ಬ್ಯಾಂಕುಗಳು ನಿರ್ಬಂಧ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸದರಿ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತು. ಸಮೀಕ್ಷೆ ಪ್ರಕಾರ ರಾಜ್ಯ ಸರಕಾರಿ ನೌಕರರ ಪೈಕಿ ಅತ್ಯಧಿಕ ಸಂಖ್ಯೆಯ ನೌಕರರು ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುತ್ತಾರೆ.
ಕರ್ನಾಟಕ ರಾಜ್ಯ ಸರಕಾರದ ಆದೇಶ ಸಂಖ್ಯೆ ಎಫ್.ಡಿ.-ಸಿಎಎಂ/1/2025 ದಿನಾಂಕ 21.2.2025 ರ ಪ್ರಕಾರ ರಾಜ್ಯ ಸರಕಾರಿ ನೌಕರರೆಲ್ಲರೂ ತಮ್ಮ ತಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆಯಾಗಿ ಬದಲಾಯಿಸಿಕೊಂಡು ವೇತನ ಖಾತೆ ಪ್ಯಾಕೇಜ್ ಅಡಿಯಲ್ಲಿ ಬರುವ ಸೌಲಭ್ಯವನ್ನು ಪಡೆಯುವುದು ಕಡ್ಡಾಯವಾಗಿದೆ.
ತಮ್ಮ ಬ್ಯಾಂಕ್ ಖಾತೆ ವೇತನ ಖಾತೆಯಾಗಿ ಬದಲಾವಣೆ ಆಗಿದೆಯೇ ಎಂದು ತಿಳಿಯಲು ಬ್ಯಾಂಕ್ ಪಾಸ್ ಪುಸ್ತಕದ ಪ್ರಥಮ ಪುಟವನ್ನು ಪರೀಕ್ಷಿಸಬೇಕು. ಆ ಪುಟದಲ್ಲಿ SBC-SGSP-PUB-IND-GOLD ಎಂಬ ನಮೂದನೆ ಇದ್ದಲ್ಲಿ ಖಾತೆಯು ವೇತನ ಖಾತೆಯಾಗಿ ಬದಲಾವಣೆ ಹೊಂದಿದೆ ಎಂದು ಅರ್ಥ.
ಗೋಲ್ಡ್ ಎಂಬ ಪದದ ಬದಲಿಗೆ ಸಿಲ್ವರ್, ಡೈಮಂಡ್, ಪ್ಲಾಟಿನಮ್ ಎಂಬ ಶಬ್ದಗಳನ್ನು ಅವರವರ ನಿವ್ವಳ ವೇತನವನ್ನು ಪರಿಗಣಿಸಿ ಬಳಸಲಾಗಿದೆ.
10000 ದಿಂದ 25000 ನಿವ್ವಳ ವೇತನ ಪಡೆಯುವವರು ಸಿಲ್ವರ್ ಖಾತೆಗೆ ಅರ್ಹರು.
25000 ದಿಂದ 50,000 ನಿವ್ವಳ ವೇತನ ಪಡೆಯುವವರು ಗೋಲ್ಡ್ ಖಾತೆಗೆ ಅರ್ಹರು.
50,000 ದಿಂದ 100000 ವರೆಗಿನ ನಿವ್ವಳ ವೇತನ ಪಡೆಯುವವರು ಡೈಮಂಡ್ ಖಾತೆಗೆ ಅರ್ಹರು. ಒಂದು ಲಕ್ಷಕ್ಕಿಂತ ಅಧಿಕ ವೇತನ ಪಡೆಯುವವರು ಪ್ಲಾಟಿನಮ್ ಕಾರ್ಡ್ ಹೊಂದಲು ಅರ್ಹರಾಗಿರುತ್ತಾರೆ.
ಒಂದು ವೇಳೆ ಸಿಲ್ವರ್ ಖಾತೆ ಹೊಂದಿದ ನೌಕರರ ನಿವ್ವಳ ವೇತನ 25000 ಕ್ಕಿಂತ ಜಾಸ್ತಿ ಇದ್ದಲ್ಲಿ ಗೋಲ್ಡ್ ಖಾತೆಗೆ ತನ್ನಿಂದ ತಾನೇ ಬದಲಾವಣೆ ಆಗುವುದಿಲ್ಲ. ಸದರಿ ನೌಕರರು ಬ್ಯಾಂಕಿಗೆ ಮನವಿ ಸಲ್ಲಿಸಿ ತಮ್ಮ ಖಾತೆಯ ಸ್ವರೂಪವನ್ನು ಬದಲಾಯಿಸಿಕೊಳ್ಳಬೇಕು.
ನೌಕರರು ತಮ್ಮ ಬ್ಯಾಂಕ್ ಖಾತೆಯನ್ನು ವೇತನ ಖಾತೆಯನ್ನಾಗಿ ಬದಲಾವಣೆ ಮಾಡಿಸದಿದ್ದರೆ HRMS ನಲ್ಲಿ ಅವರ ಸಂಬಳವನ್ನು ಸೆಳೆಯಲಾಗುವುದಿಲ್ಲ ಎಂಬ ಆದೇಶವಿದೆ. ಆದುದರಿಂದ ವೇತನ ಖಾತೆ ಹೊಂದಿರದ ನೌಕರರು ಈ ಕೆಳಗಿನ ದಾಖಲೆಗಳನ್ನು ಬ್ಯಾಂಕ್ ಗೆ ನೀಡಿ ತಮ್ಮ ಖಾತೆಯನ್ನು ಮೇ 2025 ರ ಒಳಗೆ ವೇತನ ಖಾತೆಯನ್ನಾಗಿ ಪರಿವರ್ತಿಸಲು ಸೂಚಿಸಲಾಗಿದೆ.
ಭರ್ತಿ ಮಾಡಿದ ವೇತನ ಖಾತೆ ಅರ್ಜಿ
ಬ್ಯಾಂಕ್ ಪಾಸ್ ಪುಸ್ತಕ
ಆಧಾರ್ ಕಾರ್ಡ್
ಪಾನ್ ಕಾರ್ಡ್
ಇತ್ತಿಚಿನ ವೇತನ ಚೀಟಿ
ವೇತನ ಖಾತೆಯನ್ನು ಹೊಂದುವುದರಿಂದ ಸಿಗುವ ಲಾಭಗಳು
1. ಖಾತೆಯನ್ನು ಪ್ರಾರಂಭಿಸಲು ಯಾವುದೇ ಠೇವಣಿ ಇಡಬೇಕೆಂದಿಲ್ಲ ಶೂನ್ಯ ಬ್ಯಾಲೆನ್ಸ್ ಗೆ ಅವಕಾಶ.
2. ಎಟಿಎಂ ಸಹಿತ ಅಪರಿಮಿತ ಉಚಿತ ವ್ಯವಹಾರಗಳಿಗೆ ಅವಕಾಶ
3. ವೈಯಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲಗಳಿಗೆ ಪ್ರೋಸೆಸ್ಸಿಂಗ್ ಶುಲ್ಕದಿಂದ ವಿನಾಯಿತಿ
4. ಉಚಿತ ಅಪಘಾತ ವಿಮೆ ಸೌಲಭ್ಯ
5. ಎರಡು ತಿಂಗಳ ನಿವ್ವಳ ವೇತನದ ಓವರ್ ಡ್ರಾಫ್ಟ್ ಸೌಲಭ್ಯ
6. ಡೆಬಿಟ್ ಕಾರ್ಡ್ ಬಳಸಿ ಮಾಡುವ ವ್ಯವಹಾರಗಳಲ್ಲಿ ವಿನಾಯಿತಿ ಹಾಗೂ ಕ್ಯಾಶ್ ಬ್ಯಾಕ್ ಸೌಲಭ್ಯ
7. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ನಿರಖು ಠೇವಣಿ ಮತ್ತಿತರ ಹೂಡಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ವಿಶೇಷ ಸೌಲಭ್ಯಗಳು
8. ಮಹಿಳಾ ಸರಕಾರಿ ನೌಕರರಿಗೆ ಬಡ್ಡಿಯಲು ರಿಯಾಯಿತಿ, ವೈದ್ಯಕೀಯ ವೆಚ್ಚ ಮರುಪಾವತಿ ಅಂತಹ ವಿಶೇಷ ಸೌಲಭ್ಯಗಳು
ಸರಕಾರಿ ನೌಕರರ ವೇತನ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಸೆಳೆಯಲು ಖಾಸಗಿ ಬ್ಯಾಂಕುಗಳು ಬಹಳಷ್ಟು ಪೈಪೋಟಿ ನೀಡುತ್ತಿವೆ. ಖಾಸಗಿ ಬ್ಯಾಂಕುಗಳ ಪೈಕಿ ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹೆಚ್.ಡಿ.ಎಫ್.ಸಿ. ಬ್ಯಾಂಕುಗಳು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿವೆ.
ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ವೇತನ ಬಟವಾಡೆ ಅಧಿಕಾರಿಗಳು ಬ್ಯಾಂಕುಗಳೊಂದಿಗೆ ವ್ಯವಹರಿಸಬೇಕು. ತಮ್ಮ ಕಚೇರಿಯ ನೌಕರರ ವೇತನ ಖಾತೆಯನ್ನು ಯಾವ ಬ್ಯಾಂಕ್ ನಲ್ಲಿ ತೆರೆದಲ್ಲಿ ಹೆಚ್ಚು ಲಾಭದಾಯಕ ಎಂಬುದನ್ನು ಅರಿತು ವೇತನ ಖಾತೆಯನ್ನು ತೆರೆಯುವುದು ನೌಕರರ ಹಿತ ದೃಷ್ಟಿಯಿಂದ ತೆಗೆದುಕೊಳ್ಳುವ ಸೂಕ್ತ ನಿರ್ಧಾರವಾಗಿದೆ.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ