
ಸಮಾನ ನಾಗರಿಕ ಸಂಹಿತೆಯನ್ನು ದೇಶ ಬಯಸುತ್ತಿದೆ: ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೊಳಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಕರೆ
ಸಮಾನ ನಾಗರಿಕ ಸಂಹಿತೆಯನ್ನು ದೇಶ ಬಯಸುತ್ತಿದೆ: ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿಗೊಳಿಸಲು ಕೇಂದ್ರ-ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಕರೆ
ಸಮಾನ ನಾಗರಿಕ ಸಂಹಿತೆಯನ್ನು ದೇಶ ಬಯಸುತ್ತಿದೆ. ಈ ಹಿನ್ನೆಲೆಯಲ್ಲಿ ಯೂನಿಫಾರ್ಮ್ ಸಿವಿಲ್ ಕೋಡ್‌ನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಕರೆ ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕರೆ ನೀಡಿದೆ.
ಮುಸ್ಲಿಂ ಕುಟುಂಬದ ಆಸ್ತಿ ವಿಭಾಗ ದಾವೆಯೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಮೀವುಲ್ಲಾ ಖಾನ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂವಿಧಾನದ 44ನೇ ವಿಧಿಯ ಆಶಯಗಳನ್ನು ಈಡೇರಿಸಲು ಸಮಾನ ನಾಗರಿಕ ಕಾಯ್ದೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾ. ಹಂಚಾಟೆ ಸಂಜೀವ ಕುಮಾರ್, ದೇಶದ ಏಕತೆ, ಸಮಗ್ರತೆ ಮತ್ತು ಎಲ್ಲರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಸಂವಿಧಾನದ ಆಶಯಗಳನ್ನು ಕಾರ್ಯಗತಗೊಳಿಸಲು ಬದ್ಧರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾನ ನಾಗರಿಕ ಕಾಯ್ದೆಯ ಜಾರಿಯಿಂದ ವಿವಿಧ ಸಮುದಾಯಗಳಲ್ಲಿ ವಿಭಿನ್ನವಾಗಿರುವ ಮಹಿಳೆಯ ಹಕ್ಕುಗಳ ಮೇಲಿನ ನಿರ್ಬಂಧಗಳಿಗೆ ಮುಕ್ತಿ ಸಿಗಲಿದ್ದು, ಎಲ್ಲರಿಗೂ ಸಮಾನ ಹಕ್ಕುಗಳ ಸಿಗಲಿದೆ. ಹಿಂದೂ ಹೆಣ್ಮಕ್ಕಳಲ್ಲಿ ಜನ್ಮತಃ ಆಸ್ತಿ ಹಕ್ಕುಗಳು ಲಭ್ಯವಾದರೆ, ಮುಸ್ಲಿಂ ಕಾನೂನಿನಲ್ಲಿ ಈ ಹಕ್ಕುಗಳು ಇಲ್ಲವಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಯುಸಿಸಿ ಮಹಿಳೆಯರಿಗೆ ನ್ಯಾಯದ ಖಾತರಿ ನೀಡುತ್ತದೆ. ಧರ್ಮ ಮತ್ತು ಜಾತಿಗಳ ನಡುವೆ ಅದು ಸಮಾನತೆ ಸೃಷ್ಟಿಸಲಿದೆ. ಭ್ರಾತೃತ್ವದ ಮೂಲಕ ವ್ಯಕ್ತಿಗತ ಘನತೆಯನ್ನು ಎತ್ತಿ ಹಿಡಿಯಲಿದೆ ಎಂದು ನ್ಯಾಯಮೂರ್ತಿಗಳು ಆಶಿಸಿದರು.