-->
ಕೋರ್ಟ್‌ನ ಕಚೇರಿ ಸಹಾಯಕಿಗೆ ಹೆರಿಗೆ ರಜೆ ನಿರಾಕರಣೆ: ಅಮಾನವೀಯ ಎಂದ ಕೋರ್ಟ್- ಒಂದು ಲಕ್ಷ ಪರಿಹಾರ

ಕೋರ್ಟ್‌ನ ಕಚೇರಿ ಸಹಾಯಕಿಗೆ ಹೆರಿಗೆ ರಜೆ ನಿರಾಕರಣೆ: ಅಮಾನವೀಯ ಎಂದ ಕೋರ್ಟ್- ಒಂದು ಲಕ್ಷ ಪರಿಹಾರ

ಕೋರ್ಟ್‌ನ ಕಚೇರಿ ಸಹಾಯಕಿಗೆ ಹೆರಿಗೆ ರಜೆ ನಿರಾಕರಣೆ: ಅಮಾನವೀಯ ಎಂದ ಕೋರ್ಟ್- ಒಂದು ಲಕ್ಷ ಪರಿಹಾರ





ಹೆರಿಗೆ ರಜೆ ನಿರಾಕರಣೆ ಅಮಾನವೀಯ ಘಟನೆ. ನಾಗರಿಕ ಸಮಾಜದಲ್ಲಿ ಇಂತಹ ಘಟನೆಯನ್ನು ಸಹಿಸಲಾಗದು ಎಂದು ಮದ್ರಾಸ್ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಚೇರಿ ಸಹಾಯಕಿಗೆ ಹೆರಿಗೆ ರಜೆ ನಿರಾಕರಿಸಿದ ಘಟನೆಗೆ ಸಂಬಂಧಿಸಿದಂತೆ ಒಂದು ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.


ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್. ಸುಬ್ರಹ್ಮಣ್ಯನ್ ಮತ್ತು ನ್ಯಾಯಮೂರ್ತಿ ಜಿ. ಆರುನ್ ಮುರುಗನ್ ಈ ಆದೇಶ ಹೊರಡಿಸಿದ್ದಾರೆ.


ವಿವಾಹ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ ಎಂಬ ಕಾರಣಕ್ಕೆ ರಜೆಯನ್ನು ನಿರಾಕರಿಸಲಾಗಿತ್ತು. ತಮಿಳುನಾಡಿನ ಕೋಡವಸಲ್ ಜಿಲ್ಲಾ ಮುನ್ಸೀಫ್ ಮತ್ತು ನ್ಯಾಯಿಕ ದಂಡಾಧಿಕಾರಿಯವರು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದರು. ಮದುವೆಯಾಗಿಲ್ಲ ಮತ್ತು ಮದುವೆಗೆ ಮುಂಚಿತವಾಗಿ ಗರ್ಭಿಣಿಯಾಗಿದ್ದಾರೆ ಎಂಬ ಕಾರಣ ನೀಡಿ ಹೆರಿಗೆ ರಜೆಯನ್ನು ನಿರಾಕರಿಸಲಾಗಿದ್ದು, ವೈವಾಹಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನ್ನು ಪರಿಗಣನೆ ಮಾಡಿರಲಿಲ್ಲ.


ದೇವಸ್ಥಾನದಲ್ಲಿ ನಡೆದಿದ್ದ ಮದುವೆ ಸಮಾರಂಭದ ಭಾವಚಿತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 28-01-2020ರಲ್ಲಿ ಪತಿಯನ್ನು ಕಳೆದುಕೊಂಡ ಕವಿತಾ, ಪತಿಯ ಮರಣಾನಂತರ ಭಾರತಿ ಎಂಬಾತನ ಜೊತೆ ಪ್ರೇಮಾಂಕುರವಾಗಿತ್ತು. ಆತ ಯುವ ವಿಧವೆಯನ್ನು ದೇವಸ್ಥಾನವೊಂದಲ್ಲಿ 28-04-2024ರಲ್ಲಿ ಮದುವೆಯಾಗಿದ್ದ. ಆ ಬಳಿಕ ಆಕೆ ಗರ್ಭಿಣಿಯಾಗಿದ್ದರು. ಆದರೆ, ಹೆರಿಗೆ ರಜೆಯನ್ನು ವಿವಾಹ ಪ್ರಮಾಣಪತ್ರ ನೀಡಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿತ್ತು.


ತಮಿಳುನಾಡಿನ ಕೋಡವಸಲ್ ಜಿಲ್ಲಾ ಮುನ್ಸೀಫ್ ಮತ್ತು ನ್ಯಾಯಿಕ ದಂಡಾಧಿಕಾರಿಯವರ ಆದೇಶದಿಂದ ಬಾಧಿತರಾದ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.


ವಿವಾಹಿತ ಮಹಿಳೆಗೆ ಹೆರಿಗೆ ರಜೆ ನೀಡಬೇಕು ಎಂಬ ಸರ್ಕಾರಿ ಆದೇಶ ಇದ್ದರೂ, ಈ ಮದುವೆ ಕಡ್ಡಾಯ ನೋಂದಣಿ ಆಗಬೇಕು ಎಂದು ಎಲ್ಲೂ ಹೇಳಿಲ್ಲ ಎಂಬುದನ್ನು ಗಮನಿಸಿದ ಮಾನ್ಯ ಹೈಕೋರ್ಟ್ ನ್ಯಾಯಪೀಠ, ಗಂಭೀರ ತಕರಾರು ಇಲ್ಲದಿದ್ದರೆ ಹೆರಿಗೆ ರಜೆ ಕೇಳಲು ಯಾವುದೇ ದಾಖಲೆಯನ್ನು ಹಾಜರುಪಡಿಸಬೇಕಿಲ್ಲ ಎಂದು ಅಭಿಪ್ರಾಯಪಟ್ಟಿತು.


ಘಟನೆಗೆ ಸಂಬಂಧಿಸಿದಂತೆ ಅರ್ಜಿದಾರರು ತನ್ನ ಪ್ರಿಯಕರ ಭಾರತಿ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಆರೋಪಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹಿರಿಯರು, ಹಿತೈಷಿಗಳು ಅರ್ಜಿದಾರರು ದೇವಸ್ಥಾನದಲ್ಲಿ ಮದುವೆಯಾಗಿರುವುದನ್ನು ನ್ಯಾಯಾಲಯದ ಮುಂದೆ ದೃಢಪಡಿಸಿದ್ದಾರೆ. ಮದುವೆಯ ಭಾವಚಿತ್ರ ಮತ್ತು ಆಹ್ವಾನ ಪತ್ರವನ್ನೂ ಹಾಜರುಪಡಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.


ಈ ದಾಖಲೆಗಳ ಆಧಾರದಲ್ಲಿ ಜಿಲ್ಲಾ ಮುನ್ಸೀಫ್ ಮತ್ತು ನ್ಯಾಯಿಕ ದಂಡಾಧಿಕಾರಿ ಸೂಕ್ತ ಆದೇಶ ಹೊರಡಿಸಬಹುದಿತ್ತು. ಆದರೆ, ಹೆರಿಗೆಯ ಘಟನೆಯನ್ನೇ ಅದು ಸಂಶಯದಿಂದ ನೋಡಿತು. ಮದುವೆಯ ಬಗ್ಗೆ ಯಾವುದೇ ತಕರಾರು ಇಲ್ಲದ ಕಾರಣ, ಹೆರಿಗೆ ರಜೆಯ ಅರ್ಜಿಯನ್ನು ಪುರಸ್ಕರಿಸಬಹುದಿತ್ತು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿತು.


ನಿಜ, ಹೆರಿಗೆ ರಜೆಯನ್ನು ವಿವಾಹಿತ ಮಹಿಳೆಯರೇ ಕೋರಬೇಕು. ಆದರೆ, ಅದಕ್ಕೆ ದಾಖಲೆ ನೀಡಲೇ ಬೇಕು ಎಂಬ ಕಠಿಣವಾದ ಕ್ರಮಗಳನ್ನು ಕೈಗೊಂಡ ನ್ಯಾಯಾಂಗ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕಿದೆ ಎಂದು ಹೇಳಿದ ನ್ಯಾಯಪೀಠ, ಸದ್ರಿ ಪ್ರಕರಣದಲ್ಲಿ ಹೆರಿಗೆ ರಜೆ ನಿರಾಕರಣೆಯಿಂದ ಮಹಿಳೆ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದಕ್ಕೆ ಉದ್ಯೋಗದಾತ ದಂಡ ತೆರಲೇಬೇಕು. ನಾಲ್ಕು ವಾರದೊಳಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಿಗೆ ಆದೇಶ ಹೊರಡಿಸಿದೆ. ಆಕೆಗೆ ಹೆರಿಗೆ ರಜೆಯ ಸಂದರ್ಭದಲ್ಲಿ ಪೂರ್ಣ ವೇತನ ಹಾಗೂ ಎಲ್ಲ ಸೌಲಭ್ಯಗಳನ್ನು ತಪ್ಪದೆ ನೀಡುವಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ತಿರುವರೂರು ನಿರ್ದೇಶನ ನೀಡಿದೆ.


ಈ ಆದೇಶದ ಪ್ರತಿಯನ್ನು ರಾಜ್ಯದ ಎಲ್ಲ ನ್ಯಾಯಾಂಗ ಅಧಿಕಾರಿಗಳಿಗೂ ಕಳುಹಿಸಿಕೊಡುವಂತೆ ಹೈಕೋರ್ಟ್ ನ್ಯಾಯಪೀಠ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.


ಪ್ರಕಣ: ಬಿ. ಕವಿತಾ Vs ಮದ್ರಾಸ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್

ಮದ್ರಾಸ್ ಹೈಕೋರ್ಟ್, WP 6195/2025 Dated 20-03-2025


madras high court orders payment of 1 lakh cost to office assistant, who denies maternity leave 



Ads on article

Advertise in articles 1

advertising articles 2

Advertise under the article