
OTS ಪಾವತಿಗೆ ನಿರ್ದೇಶನ ರದ್ದು: ಸಾಲ ತೀರುವಳಿ ಯೋಜನೆ ರೂಪಿಸುವುದು ಬ್ಯಾಂಕ್‌ಗಳ ಕೆಲಸ, ಕೋರ್ಟ್ ಮಧ್ಯಪ್ರವೇಶವಿಲ್ಲ- ಕರ್ನಾಟಕ ಹೈಕೋರ್ಟ್
OTS ಪಾವತಿಗೆ ನಿರ್ದೇಶನ ರದ್ದು: ಸಾಲ ತೀರುವಳಿ ಯೋಜನೆ ರೂಪಿಸುವುದು ಬ್ಯಾಂಕ್‌ಗಳ ಕೆಲಸ, ಕೋರ್ಟ್ ಮಧ್ಯಪ್ರವೇಶವಿಲ್ಲ- ಕರ್ನಾಟಕ ಹೈಕೋರ್ಟ್
ನಿಗದಿತ ಕಾಲಾವಧಿ ಮೀರಿ OTS ಬಾಕಿ ಹಣ ಪಡೆಯಲು ಒಪ್ಪಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಹೈಕೋರ್ಟ್ ನೀಡಿದ್ದ ನಿರ್ದೇಶನ ದೋಷಪೂರಿತವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ನಟರಾಜನ್ ಮತ್ತು ವಿಜಯ ಕುಮಾರ್ ಪಾಟೀಲ್ ಅವರಿದ್ದ ಕಲ್ಬುರ್ಗಿ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪಿನ ವಿರುದ್ಧ ಮಾಡಲಾದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಸಾಲ ತೀರುವಳಿ ಯೋಜನೆ ರೂಪಿಸುವುದು ಬ್ಯಾಂಕ್‌ಗಳ ಕೆಲಸ. ಇದರಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್ ನ್ಯಾಯಪೀಠ, ಏಕಸದಸ್ಯ ಪೀಠ ನೀಡಿದ್ದ ತೀರ್ಪು ದೋಷಪೂರಿತವಾಗಿದ ಎಂದು ಆದೇಶದಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ರೂಪಿಸಿರುವ ಮಾರ್ಗಸೂಚಿ ಪ್ರಕಾರ, ಒಂದು ಬಾರಿಯ ತೀರುವಳಿ(One Time Settlement-OTS) ಕಾಲಾವಧಿ ತೀರಿದ ನಂತರ 20 ಲಕ್ಷ ರೂ.ಗಳನ್ನು ಸ್ವೀಕರಿಸುವಂತೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪು ದೋಷಪೂರಿತವಾಗಿದೆ ಮತ್ತು ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಕಲ್ಬುರ್ಗಿಯಲ್ಲಿ ಉದ್ಯಮ ನಡೆಸುತ್ತಿದ್ದ ಮಹಾಲಿಂಗಪ್ಪ ಹಾಗೂ ಪುತ್ರರಿಗೆ 2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1.5 ಕೋಟಿ ರೂ. ಸಾಲ ನೀಡಿತ್ತು. ಆ ಸಂದರ್ಭದಲ್ಲಿ ಎಸ್‌ಬಿಐ ನೀಡಿದ್ದ ಸಾಲಕ್ಕೆ ಕೆಲವು ಸ್ಥಿರಾಸ್ತಿಗಳನ್ನು ಅಡಮಾನವಾಗಿ ಪಡೆದುಕೊಂಡಿತ್ತು.
ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಸರ್ಫೇಸಿ ಕಾಯಿದೆ 2002ರ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಿತ್ತು. ಆ ನಂತರ ಎಸ್‌ಬಿಐ, ತಾನು ಭದ್ರತೆಯಾಗಿ ಪಡೆದುಕೊಂಡಿದ್ದ ಆಸ್ತಿಗಳನ್ನು ಸಾಂಕೇತಿಕವಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.
ಆ ನಂತರ, ಬ್ಯಾಂಕ್‌ಗೆ ತೆರಳಿದ ಸುಸ್ತಿದಾರರು ತಮಗೆ ವನ್ ಟೈಮ್ ಸೆಟಲ್‌ಮೆಂಟ್ ನೀಡಿದರೆ 2019ರ ಅಂತ್ಯದೊಳಗೆ ಪೂರ್ತಿ ಹಣ ಪಾವತಿಸುತ್ತೇವೆ ಎಂದು ಮನವಿ ಮಾಡಿದ್ದರು. ಈ ಪ್ರಸ್ತಾಪಕ್ಕೆ ಬ್ಯಾಂಕ್ ಕೂಡ ಒಪ್ಪಿಗೆ ನೀಡಿತ್ತು.
ಆದರೆ, ಮೊದಲೇ ಒಪ್ಪಿಕೊಂಡಿದ್ದ ಅವಧಿಯಲ್ಲಿ ಸುಸ್ತಿದಾರರು ಹಣ ಪಾವತಿ ಮಾಡಲಿಲ್ಲ. ಹೀಗಾಗಿ, ಎಸ್‌ಬಿಐ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಿಲ್ಲಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿತು. ಇದನ್ನು ಪ್ರಶ್ನಿಸಿ ಸುಸ್ತಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿತ್ತು. ಆದರೆ, ಇದೀಗ ವಿಭಾಗೀಯ ನ್ಯಾಯಪೀಠ, ಎಸ್‌ಬಿಐ ಪರವಾಗಿ ತೀರ್ಪು ನೀಡಿದೆ.
ಪ್ರಕರಣ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Vs ಮಹಾಲಿಂಗಪ್ಪ
ಕರ್ನಾಟಕ ಹೈಕೋರ್ಟ್, WA 200076/2025 Dated 04-04-2025