
PTCL Act: ಪಿಟಿಸಿಎಲ್ ಕಾಯ್ದೆ: ವಾಸ್ತವ ಮರೆಮಾಚಿ ಜಮೀನಿನ ಹಕ್ಕು ಮರುಸ್ಥಾಪನೆ ಕೋರಿದ್ದ ಕುಟುಂಬ ಸದಸ್ಯರಿಗೆ ದಂಡ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
PTCL Act: ಪಿಟಿಸಿಎಲ್ ಕಾಯ್ದೆ: ವಾಸ್ತವ ಮರೆಮಾಚಿ ಜಮೀನಿನ ಹಕ್ಕು ಮರುಸ್ಥಾಪನೆ ಕೋರಿದ್ದ ಕುಟುಂಬ ಸದಸ್ಯರಿಗೆ ದಂಡ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕೆಲವು ಜಮೀನುಗಳ ವರ್ಗಾವಣೆ ನಿಷೇಧ ಕಾಯ್ದೆ 1978ರ ಅಡಿಯಲ್ಲಿ ಜಮೀನಿನ ಹಕ್ಕು ಪುನರ್‌ಸ್ಥಾಪಿಸಲು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೆ ತಲಾ 25 ಸಾವಿರ ರೂ. ದಂಡ ವಿಧಿಸಿ ಕಾಯ್ದೆ ದುರುಪಯೋಗದ ವಿರುದ್ಧ ಬಿಸಿ ಮುಟ್ಟಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ವಿ. ಕಾಮೇಶ್ವರ್ ರಾವ್ ಮತ್ತು ನ್ಯಾಯಮೂರ್ತಿ ಟಿ.ಎಂ. ನಡಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ರಿಟ್ ಅರ್ಜಿ 24438/2009ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ತೀರ್ಪು ವಿರುದ್ಧ ಅರ್ಜಿದಾರರು ಮೇಲ್ಮನವಿ ಸಲ್ಲಿಸಿದ್ದರು. ಬೆಂಗಳೂರಿನ ಆನೇಕಲ್ ತಾಲೂಕು ಸರ್ಜಾಪುರದಲ್ಲಿ ಚಿಕ್ಕವೆಂಕಮ್ಮ @ ವೆಂಕಟಮ್ಮ ಅವರಿಗೆ ಸೇರಿದ ಜಮೀನಿನ ಹಕ್ಕು ವರ್ಗಾವಣೆ ಕುರಿತ ಪರಭಾರೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.
ಮೂಲ ಮಂಜೂರುದಾರರಾದ ಶ್ರೀಮತಿ ಚಿಕ್ಕವೆಂಕಮ್ಮ @ ವೆಂಕಟಮ್ಮ 1998ರಲ್ಲಿ ಜಮೀನನ್ನು ನೋಂದಣಿ ಮೂಲಕ ಕ್ರಯ ಪತ್ರದ ಮೂಲಕ ಪರಭಾರೆ ಮಾಡಿದ್ದರು. ಈ ಕ್ರಯ ಪತ್ರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕೆಲವು ಜಮೀನುಗಳ ವರ್ಗಾವಣೆ ನಿಷೇಧ ಕಾಯ್ದೆ 1978ರ ಸೆಕ್ಷನ್ 4ರ ಅಡಿಯಲ್ಲಿ ಅನುಮತಿ ಪಡೆಯಲಾಗಿತ್ತು. ಆ ಬಳಿಕ, ನೋಂದಾಯಿತ ಜಮೀನು ಮಾಲಕರು 2004ರ ಮಾರ್ಚ್ 15ರಂದು ಆರನೇ ಪ್ರತಿವಾದಿಗೆ ಕ್ರಯಪತ್ರದ ಮೂಲಕ ಜಮೀನು ಮಾರಾಟ ಮಾಡಿದ್ದರು.
2005ರಲ್ಲಿ ಮೂಲ ಹಕ್ಕುದಾರರು ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮಾರಾಟ ನಿರ್ಬಂಧಿಸಲು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎಸಿ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಬಾಧಿತರಾದ ಅರ್ಜಿದಾರರು ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲಿ ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಲಾಗಿತ್ತು.
ಡಿಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಬಾಧಿತ ಪ್ರತಿವಾದಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ರಿಟ್ ಅರ್ಜಿ 24438/2009ಕ್ಕೆ ಸಂಬಂಧಿಸಿದಂತೆ ನ್ಯಾಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ತೀರ್ಪು ನೀಡಿತು.
ಈ ತೀರ್ಪನ್ನು ಪ್ರಶ್ನಿಸಿ ವಿಭಾಗೀಯ ಪೀಠದ ಮೊರೆ ಹೋಗಿದ್ದ ಅರ್ಜಿದಾರರಿಗೆ ಹಿನ್ನಡೆ ಉಂಟಾಯಿತು. ಮಾತ್ರವಲ್ಲದೆ, ವಾಸ್ತವ ಅಂಶಗಳನ್ನು ಮರೆಮಾಚಿದ್ದ ಕಾರಣಕ್ಕೆ ಅರ್ಜಿದಾರರಿಗೆ ತಲಾ 25 ಸಾವಿರ ರೂ.ಗಳ ದಂಡ ವಿಧಿಸಿ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಬಿಸಿ ಮುಟ್ಟಿಸಿತು.
ಸರ್ಕಾರದಿಂದ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ವ್ಯಕ್ತಿಗೆ ಮಂಜೂರಾಗಿದ್ದ ಜಮೀನನ್ನು ಮತ್ತೊಬ್ಬರಿಗೆ ನೋಂದಣಿ ಮಾಡಿಕೊಡಲಾಗಿದೆ. ಮತ್ತು ಈ ಕುರಿತು ವಾಸ್ತವ ಅಂಶಗಳನ್ನು ಅರ್ಜಿದಾರರು ನ್ಯಾಯಾಲಯಕ್ಕೆ ಮರೆಮಾಚಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಜಮೀನುಗಳ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆ–1978ರ ಅಡಿಯಲ್ಲಿ ಜಮೀನಿನ ಹಕ್ಕು ಪುನರ್ ಸ್ಥಾಪಿಸಲು ನ್ಯಾಯಾಲಯದ ಮೆಟ್ಟಿಲೇರಿದ್ದ ಕುಟುಂಬದ ಸದಸ್ಯರಿಗೆ ಕರ್ನಾಟಕ ಉಚ್ಚ ನ್ಯಾಯಾಲಯವು ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡವನ್ನು ನಾಲ್ಕು ವಾರದೊಳಗೆ ವಕೀಲರ ಕಲ್ಯಾಣ ನಿಧಿಗೆ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕವಾಗಿ ಮತ್ತು ಅರ್ಥಿಕ ತುಳಿತಕ್ಕೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೆರವಿಗಾಗಿ ಪಿಟಿಸಿಎಲ್ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಈ ಕಾಯಿದೆಯಡಿ ಮಂಜೂರಾದ ಜಮೀನನ್ನು ಪರಭಾರೆ ಮಾಡುವುದಕ್ಕೆ ನಿಷೇಧವಿದೆ. ಆದರೂ, ಶ್ರೀಮಂತರು ಹಾಗೂ ಪ್ರಬಲರು ಇಂತಹ ಜಮೀನುಗಳನ್ನು ಪಡೆಯಲು ಅನುದಾನಿತರ ಬಡತನ ಮತ್ತು ಅನಕ್ಷರತೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ” ಎಂದು ಪೀಠವು ವಿಷಾದ ವ್ಯಕ್ತಪಡಿಸಿದೆ.
ಈ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲು ವಿಶೇಷ ವ್ಯವಸ್ಥೆಯ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಧಿಕಾರಿಗಳ ವಿಳಂಬ ಧೋರಣೆ ಮತ್ತು ಕ್ಷಿಪ್ರ ಮೇಲ್ಮನವಿ ಮಾಡಲು ಸರ್ಕಾರ ಮೀನ ಮೇಷ ಎಣಿಸುವುದರ ಬಗ್ಗೆ ಹೈಕೋರ್ಟ್ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಉಪ ವಿಭಾಗಾಧಿಕಾರಿ ನ್ಯಾಯಾಲಯವು ಮೂಲ ಪ್ರಾಧಿಕಾರವಾಗಿದ್ದು, ಉಪ ವಿಭಾಗಾಧಿಕಾರಿಯವರು ಕಂದಾಯ ಉಪ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಅವರಿಗೆ ಈ ಕಾಯ್ದೆಯಡಿ ಮಂಜೂರಾದ ಜಮೀನುಗಳ ಎಲ್ಲ ಮಾಹಿತಿ ಇರಬೇಕು. ಈ ಮಾಹಿತಿಯನ್ನು ಬಳಸಿ ಶೋಷಿತರ ವಿರುದ್ಧ ಜಮೀನು ಪರಭಾರೆ ಕಂಡುಬಂದರೆ, ತಮ್ಮ ಪ್ರದತ್ತ ಅಧಿಕಾರ ಚಲಾಯಿಸಿ ಇದನ್ನು ತಡೆಯಲು ತಕ್ಷಣ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಕರಣ: ನಾರಾಯಣಮ್ಮ Vs ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ಮತ್ತಿತರರು
ಕರ್ನಾಟಕ ಹೈಕೋರ್ಟ್: WA 22/2023 Dated 28-03-2025